ಬೆಂಗಳೂರು, ಜ.28 (DaijiworldNews/PY): "ಕರ್ನಾಟಕದಲ್ಲಿ ಮರಾಠ ಸಮಾಜದವರು ಸಂತೋಷದಿಂದಿದ್ದಾರೆ" ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಮಹಾರಾಷ್ಟ್ರ ಸಿಎಂ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ಬೆಳಗಾವಿ ಗಡಿ ಭಾಗ ಹಾಗೂ ಬೆಳಗಾವಿ ನೆಲ ಕರ್ನಾಟಕದ ಒಂದು ಅಂಗವಾಗಿದೆ. ಕರ್ನಾಟಕದಲ್ಲಿ ಮರಾಠ ಸಮಾಜದ ನನ್ನ ಎಲ್ಲಾ ಬಾಂಧವರು ಸಂತೋಷದಲ್ಲಿದ್ದಾರೆ" ಎಂದಿದ್ದಾರೆ.
"ಮಹಾರಾಷ್ಟ್ರದ ಗಡಿನಾಡಿನಲ್ಲೂ ಕೂಡಾ ಕನ್ನಡಿಗರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಶಾಲೆಗಳಲ್ಲಿ ಮರಾಠಿಗರು ಕಲಿಯಲು ಇಚ್ಛಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆಗೆ ತಿರುಗೇಟು ನೀಡಿದ ಅವರು, "ನಾವು ಮಹಾರಾಷ್ಟ್ರಕ್ಕೆ ಹೋಗುತ್ತೇವೆ ಎಂದು ಯಾವ ಮರಾಠಿಗರು ಹೇಳಿಲ್ಲ. ಈ ವಿಚಾರದ ಬಗ್ಗೆ ರಾಜಕೀಯ ಬೇಡ. ಗಡಿ ಜಿಲ್ಲೆಯ ಮರಾಠಿಗರು ಯಾವುದೇ ಕಾರಣಕ್ಕೂ ನಿಮಗೆ ಬೆಂಬಲ ನೀಡುವುದಿಲ್ಲ" ಎಂದಿದ್ದಾರೆ.