ಆಗ್ರಾ, ಜ. 28 (DaijiworldNews/HR): ಪ್ರೇಮಿಗಳ ದಿನಾಚರಣೆಯ ಮೊದಲು ಹುಡುಗಿಯರು ಕನಿಷ್ಠ ಒಬ್ಬ ಪ್ರಿಯತಮನನ್ನು ಹೊಂದಿರಬೇಕು ಎಂದು ಕೋರಿ ನಕಲಿ ಸುತ್ತೋಲೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಆಗ್ರಾದ ಸೈಂಟ್ ಜಾನ್ಸ್ ಕಾಲೇಜಿನ ಪ್ರಾಂಶುಪಾಲರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಾಂಶುಪಾಲ ಪ್ರೊ. ಎಸ್.ಪಿ ಸಿಂಗ್ ಅವರು ನೀಡಿರುವ ದೂರಿನಲ್ಲಿ, ಈ ಸುತ್ತೋಲೆಯು ನಕಲಿಯಾಗಿದ್ದು, ಅಂತಹ ಯಾವುದೇ ಸುತ್ತೋಲೆಯನ್ನು ನಮ್ಮ ಕಾಲೇಜು ಹೊರಡಿಸಿಲ್ಲ ಎಂದು ಹೇಳಿದ್ದಾರೆ.
ಸೈಂಟ್ ಜಾನ್ಸ್ ಕಾಲೇಜಿನ ಹೆಸರಿನಲ್ಲಿ ಸುತ್ತೋಲೆ ಹೊರಡಿಸಲಾಗಿದ್ದು, "ಭದ್ರತಾ ಉದ್ದೇಶಗಳಿಗಾಗಿ ಎಲ್ಲಾ ಹುಡುಗಿಯರು ಫೆಬ್ರವರಿ 14 ರೊಳಗೆ ಕನಿಷ್ಠ ಒಬ್ಬ ಗೆಳೆಯನನ್ನು ಹೊಂದಿರುವುದು ಕಡ್ಡಾಯವಾಗಿದ್ದು, ಒಂಟಿ ಹುಡುಗಿಯರನ್ನು ಕಾಲೇಜಿನಲ್ಲಿ ಅನುಮತಿಸಲಾಗುವುದಿಲ್ಲ" ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಇನ್ನು "ಇದು ಸಂಪೂರ್ಣವಾಗಿ ಚೇಷ್ಟೆಯ ಕೃತ್ಯವಾಗಿದ್ದು, ಕಾಲೇಜಿನ ಹೆಸರನ್ನು ಕೆಡಿಸುವ ಉದ್ದೇಶ ಹೊಂದಿದ್ದು ಇದಕ್ಕೆ ಕಾರಣರಾದವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ನಾವು ಹರಿ ಪರ್ವತ್ ಪೊಲೀಸ್ ಠಾಣೆಗೆ ತಿಳಿಸಿದ್ದೇವೆ" ಎಂದು ಎಸ್.ಪಿ ಸಿಂಗ್ ಹೇಳಿದ್ದಾರೆ.