ನವದೆಹಲಿ, ಜ.28 (DaijiworldNews/MB) : ಅಯೋಧ್ಯೆ ಮಸೀದಿ ನಿರ್ಮಾಣಕ್ಕೆ ದೇಣಿಗೆ ನೀಡುವುದು, ಅಲ್ಲಿ ಪ್ರಾರ್ಥಿಸುವುದು 'ಹರಾಮ್' ಎಂದು ಹೇಳಿದ ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ (ಎಐಎಂಐಎಂ) ಮುಖ್ಯಸ್ಥ ಅಸ್ಸಾದುದ್ದೀನ್ ಓವೈಸಿಗೆ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ನ ಅಯೋಧ್ಯೆ ಮಸೀದಿ ಟ್ರಸ್ಟ್ನ ಕಾರ್ಯದರ್ಶಿ ಅಥರ್ ಹುಸೇನ್ ತಿರುಗೇಟು ನೀಡಿದ್ದಾರೆ. ''ಓವೈಸಿಯ ಹೇಳಿಕೆ ಬರೀ ರಾಜಕೀಯ ಅಜೆಂಡಾ'' ಎಂದು ಅಥರ್ ಹುಸೇನ್ ಹೇಳಿದ್ದಾರೆ.
ಮಂಗಳವಾರ ಬೀದರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಓವೈಸಿ, ''ಅಯೋಧ್ಯೆ ಮಸೀದಿ ಇಸ್ಲಾಮಿಕ್ ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ಜನರು ಅದರ ನಿರ್ಮಾಣಕ್ಕಾಗಿ ದೇಣಿಗೆ ನೀಡಬಾರದು ಅಥವಾ ಪ್ರಾರ್ಥನೆ ಸಲ್ಲಿಸಬಾರದು'' ಎಂದು ಹೇಳಿದ್ದರು.
ಓವೈಸಿಯ ಈ ಹೇಳಿಕೆ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅಥರ್ ಹುಸೇನ್, ''ಈ ಭೂಮಿಯ ಯಾವುದೇ ಜಾಗವು ಹರಾಮ್ ಆಗಲು ಸಾಧ್ಯವಿಲ್ಲ. ಅಲ್ಲಿ ಸರ್ವಶಕ್ತನಾದ ಅಲ್ಲಾಹನಿಗಾಗಿ ನಮಾಜ್ (ಪ್ರಾರ್ಥನೆ) ಮಾಡಲಾಗುತ್ತದೆ'' ಎಂದು ಹೇಳಿದ್ದಾರೆ.
''ಓವೈಸಿಯ ಪೂರ್ವಜರು 1857 ರ ದಂಗೆಯಲ್ಲಿ ಭಾಗವಹಿಸಲಿಲ್ಲ. ಹೈದರಾಬಾದ್ ಸಂಸದರು ಹೋರಾಟವನ್ನು ಕಾಣದ ಅಥವಾ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಆಘಾತವನ್ನು ಅನುಭವಿಸದ ಪ್ರದೇಶದಿಂದ ಬಂದಿದ್ದಾರೆ'' ಎಂದು ಹುಸೇನ್ ಟಾಂಗ್ ನೀಡಿದ್ದಾರೆ.
''1857 ರ ಬ್ರಿಟಿಷರ ವಿರುದ್ಧದ ದಂಗೆಯಲ್ಲಿ ಓವೈಸಿಯ ಪೂರ್ವಜರು ಎಂದಿಗೂ ಭಾಗವಹಿಸದಿರಬಹುದು'' ಎಂದು ಕೂಡಾ ಅವರು ಹೇಳಿದ್ದಾರೆ.