ಬೆಂಗಳೂರು,ಜ. 28 (DaijiworldNews/HR): "ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಾಲ ಬಿಚ್ಚಿದರೆ ನಾವು ಕೈಕಟ್ಟಿ ಕೂರುವುದಿಲ್ಲ" ಎಂದು ಬೆಳಗಾವಿ ವಿಚಾರಕ್ಕೆ ಠಾಕ್ರೆ ಹೇಳಿಕೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಮಹಾರಾಷ್ಟ್ರ ಸಿಎಂ ಬಾಲ ಬಿಚ್ಚಿದರೆ ನಾವು ಕೈಕಟ್ಟಿ ಕೂಳಿತುಕೊಳ್ಳುವುದಿಲ್ಲ, ಅವರು ಹಾಗೆ ಕೇಳಿದರೆ ನಾವೂ ಸೊಲ್ಲಾಪುರ, ಮುಂಬೈಯನ್ನು ಕೇಳಬೇಕಾಗುತ್ತದೆ. ನಾವು ವಿವಿಧತೆಯಲ್ಲಿ ಏಕತೆ ಕಂಡವರು. ಅವರು ಈ ರೀತಿ ಹೇಳಿಕೆ ನೀಡುವುದು ತಪ್ಪು" ಎಂದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು "ಬೆಳಗಾವಿ, ನಿಪ್ಪಾಣಿ ಮತ್ತು ಕಾರವಾರ ಪ್ರದೇಶಗಳು ನಮ್ಮವು. ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ಇತ್ಯರ್ಥವಾಗುವವರೆಗೆ ಬೆಳಗಾವಿ ಸೇರಿದಂತೆ ಮರಾಠಿ ಭಾಷಿಕರು ಹೆಚ್ಚಾಗಿರುವ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು" ಎಂದಿದ್ದರು.