ಲಕ್ನೋ, ಜ.28 (DaijiworldNews/PY): "ಜ.26ರ ಮಂಗಳವಾರ ನಡೆದ ಟ್ಯ್ರಾಕ್ಟರ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಉತ್ತರಪ್ರದೇಶದ ರೈತ ಗುಂಡೇಟಿನಿಂದ ಸಾವನ್ನಪ್ಪಿಲ್ಲ" ಎಂದು ಉತ್ತರಪ್ರದೇಶ ಪೊಲೀಸರು ತಿಳಿಸಿದ್ದಾರೆ.
"26 ವರ್ಷದ ಆ ವ್ಯಕ್ತಿ ಟ್ಯ್ರಾಕ್ಟರ್ ಅಪಘಾತದ ಗಾಯಗಳಿಂದ ಮೃತಪಟ್ಟಿದ್ದಾನೆ ಎನ್ನುವುದು ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
"ಆತ ಗುಂಡೇಟಿನಿಂದ ಸಾವನ್ನಪ್ಪಿಲ್ಲ ಎಂದು ಮರಣೋತ್ತರ ಪರೀಕ್ಷಾ ವರದಿ ಸ್ಪಷ್ಟಪಡಿಸುತ್ತದೆ. ವಿಡಿಯೋದಲ್ಲಿ ನೋಡಿದಂತೆ, ಟ್ಯ್ರಾಕ್ಟರ್ ಪಲ್ಟಿಯಾದ ಸಂದರ್ಭ ಆದ ಗಾಯಗಳಿಂದ ಆತ ಸಾವನ್ನಪ್ಪಿದ್ದಾನೆ" ಎಂದು ಯುಪಿ ಹಿರಿಯ ಪೊಲೀಸ್ ಅಧಿಕಾರಿ ಅವಿನಾಶ್ ಚಂದ್ರ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಘಟನೆಯ ಕುರಿತಂತೆ ಸಿಸಿಟಿವಿ ದೃಶ್ಯಾವಳಿಗಳು ನಿನ್ನೆ ಬಿಡುಗಡೆಯಾಗಿದ್ದು, ಪೊಲೀಸ್ ಬ್ಯಾರೀಕೇಡ್ ಕಡೆಗೆ ನೀಲಿ ಬಣ್ಣದ ಟ್ಯ್ರಾಕ್ಟರ್ ವೇಗವಾಗಿ ಚಲಿಸುತ್ತಿರುವುದು ಕಂಡುಬಂದಿದೆ. ಈ ವೇಳೆ ಬ್ಯಾರಿಕೇಡ್ಗೆ ಗುದ್ದಿ ಅಪಘಾತ ಸಂಭವಿಸಿದೆ.
ಅಪಘಾತದ ಗಾಯಗಳಿಂದಾಗಿ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದು, ಕೆಲವು ಪ್ರತಿಭಟನಾಕಾರರು ಆತನನ್ನು ಪೊಲೀಸರು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದಿದ್ದರು.
"ನರ್ವೀತ್ ಸಿಂಗ್ ಎನ್ನುವ ವ್ಯಕ್ತಿ ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಿಂದ ತನ್ನ ಊರಿಗೆ ಹಿಂದಿರುಗಿದ್ದ. ಈತ ರಾಂಪುರದ ಬಿಲಾಸ್ಪುರ್ ಪ್ರದೇಶದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದು, ನಾವೆಲ್ಲರೂ ಪ್ರತಿಭಟನೆಯಲ್ಲು ಒಟ್ಟಿಗೆ ಭಾಗವಹಿಸಿದ್ದೆವು. ಆದರೆ, ಈ ಅಪಘಾತ ಸಂಭವಿಸುತ್ತದೆ ಎಂದು ಭಾವಿಸಿರಲಿಲ್ಲ" ಎಂದು ನೆರೆಹೊರೆಯವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಆಗ್ರಹಿಸಿ ಕಳೆದ ಒಂದೂವರೆ ತಿಂಗಳಿಗೂ ಅಧಿಕ ಕಾಲದಿಂದ ದೆಹಲಿಯ ಹಲವು ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಲಿರುವ ರೈತರು ಗಣರಾಜ್ಯೋತ್ಸವದ ದಿನದಂದು ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಂಡಿದ್ದರು.
ದೆಹಲಿಯಲ್ಲಿ ಮಂಗಳವಾರ ಟ್ಯ್ರಾಕ್ಟರ್ ರ್ಯಾಲಿ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು 200 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ಬಳಿಕ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಈ ಹಿಂಸಾಚಾರಕ್ಕೆ ಸಂಬಂಧಿಸಿ ಈವರೆಗೆ 22 ಎಫ್ಐಆರ್ ದಾಖಲಾಗಿದೆ.