ಮಲಪ್ಪುರಂ, ಜ.28 (DaijiworldNews/MB) : ಈ ಹಿಂದೆ ಕಾಂಗ್ರೆಸ್ ನಾಯಕ, ವಯನಾಡು ಸಂಸದ ರಾಹುಲ್ ಗಾಂಧಿ ಭಾಷಣವನ್ನು ದೋಷವಿಲ್ಲದೆ ಅನುವಾದ ಮಾಡಿ ಮೆಚ್ಚುಗೆ ಗಳಿಸಿದ್ದ ಕೇರಳದ ಮಲಪ್ಪುರಂನ ಕರುವಾರಕ್ಕುಂಡ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಫಾತಿಮಾ ಸಫಾ ಬುಧವಾರ ಮತ್ತೆ ಸುದ್ದಿಯಾಗಿದ್ದಾರೆ. ಹೌದು, ಬುಧವಾರ ವಂದೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಹುಲ್ ಗಾಂಧಿಯವರ ಭಾಷಣವನ್ನು ಸಫಾ ತ್ವರಿತವಾಗಿ ಅನುವಾದಿಸಿ ಅಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ಮತ್ತು ಇತರರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.
2019 ರ ಡಿಸೆಂಬರ್ನ ಫೋಟೋ
ಕೊರೊನಾ ಸೋಂಕಿನ ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಮಾಸ್ಕ್ ಧರಿಸುವ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು.
ರಾಹುಲ್ ಗಾಂಧಿಯವರು ಹೊಸ ಬ್ಲಾಕ್ ಉದ್ಘಾಟನೆಗಾಗಿ ವಂದೂರಿನ ಶಾಲೆಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, "ನಾನು ಹೆಚ್ಚಾಗಿ ಮುಗುಳ್ನಗುತ್ತೇನೆ. ಆದರೆ ನಾನು ಮಾಸ್ಕ್ ಧರಿಸಿರುವುದರಿಂದ ಯಾರಿಗೂ ಕಾಣಿಸಲ್ಲ. ಅವರು ನನ್ನನ್ನು ನೋಡಿ ನಗುತ್ತಿದ್ದಾರೆಂದು ನನಗೆ ತಿಳಿಯುತ್ತದೆ. ಆದರೆ ಮಾಸ್ಕ್ ಹಾಕಿರುವುದರಿಂದ ನನಗೆ ಅದನ್ನು ನೋಡಲು ಸಾಧ್ಯವಿಲ್ಲ. ಆದರೆ ನಾವು ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರುವುದರಿಂದ ನಾವು ಮಾಸ್ಕ್ ಧರಿಸಬೇಕಾಗಿದೆ" ಎಂದು ಹೇಳಿದರು.
"ಈ ಸಂದೇಶವು ಯುವತಿಯರಿಗಾಗಿ ಆಗಿದೆ. ನಿಮಗೆ ಅತ್ಯಂತ ಮುಖ್ಯವಾದದ್ದು ಸ್ವಾತಂತ್ರ್ಯ. ಆರ್ಥಿಕ ಮತ್ತು ಮಾನಸಿಕ ಸ್ವಾತಂತ್ರ್ಯದಿಂದಾಗಿ ನೀವು ನಿಮ್ಮದೇ ಕಾಲಲ್ಲಿ ನಿಂತು ಸ್ವಾವಲಂಭಿಗಳಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ" ಎಂದು ರಾಹುಲ್ ಹೇಳಿದರು.
ಏಪ್ರಿಲ್-ಮೇ ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಹಿನ್ನೆಲೆ ರಾಹುಲ್ ಗಾಂಧಿಯವರು ಎರಡು ದಿನಗಳ ಕಾಲಕ್ಕಾಗಿ ವಯನಾಡು ಭೇಟಿ ನೀಡಿದ್ದಾರೆ.
2019 ರ ಡಿಸೆಂಬರ್ನಲ್ಲಿ ಗಾಂಧಿಯವರು ತಮ್ಮ ಕ್ಷೇತ್ರವಾದ ವಯನಾಡಕ್ಕೆ ಭೇಟಿ ನೀಡಿದಾಗ ಕಾರ್ಯಕ್ರಮವೊಂದರಲ್ಲಿ, ''ನಾನು ಇಂಗ್ಲಿಷ್ನಲ್ಲಿ ಮಾತನಾಡಲಿದ್ದೇನೆ. ನನ್ನ ಭಾಷಣವನ್ನು ಅನುವಾದ ಮಾಡಲು ಯಾರಾದರೂ ಮುಂದೆ ಬಂದರೆ ಚೆನ್ನಾಗಿರುತ್ತಿತ್ತು. ನಾನು ಹೇಳಿದ್ದನ್ನು ತರ್ಜುಮೆ ಮಾಡಲು ವಿದ್ಯಾರ್ಥಿಗಳು ಯಾರಾದರೂ ಇದ್ದೀರಾ?'' ಎಂದು ಕೇಳಿದ್ದರು. ಈ ವೇಳೆ ಯಾವ ಆಲೋಚನೆಯೂ ಇಲ್ಲದೆ ಭಾಷಣ ಅನುವಾದಕ್ಕೆ ಮುಂದಾದ ವಿದ್ಯಾರ್ಥಿನಿ ಸಫಾ, ಇಂಗ್ಲಿಷ್ನಲ್ಲಿ ರಾಹುಲ್ ಒಂದು ವಾಕ್ಯ ಹೇಳಿ ನಿಲ್ಲಿಸುತ್ತಿದ್ದಂತೆ ಸ್ವಲ್ಪವೂ ತಡವರಿಸದೆ ಸಫಾ ಅದರ ಅನುವಾದವನ್ನು ಮಾಡಿ ಮೆಚ್ಚುಗೆ ಗಳಿಸಿದ್ದರು.