ನವದೆಹಲಿ, ಜ. 28 (DaijiworldNews/HR): ಗಣರಾಜ್ಯೋತ್ಸವದಂದು ರೈತರು ನಡೆಸಿದ್ದ ಟ್ರಾಕ್ಟರ್ ರ್ಯಾಲಿ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ರೈತ ಮುಖಂಡ ದರ್ಶನ್ ಪಾಲ್ ಅವರಿಗೆ ಬುಧವಾರ ನೋಟಿಸ್ ನೀಡಿದ್ದಾರೆ.
ಗಣರಾಜ್ಯೋತ್ಸವದಂದು ಕೆಂಪು ಕೋಟೆಯಲ್ಲಿ ನಡೆದ ವಿಧ್ವಂಸಕ ಕೃತ್ಯವು "ಅತ್ಯಂತ ಶೋಚನೀಯ ಮತ್ತು ರಾಷ್ಟ್ರ ವಿರೋಧಿ ಕೃತ್ಯ" ಎಂದು ಪೊಲೀಸರು ಹೇಳಿದ್ದು, ದರ್ಶನ್ ಪಾಲ್ ಅವರನ್ನು ಮೂರು ದಿನದೊಳಗೆ ಇದಕ್ಕೆ ಉತ್ತರ ಕೊಡುವಂತೆ ನೋಟಿಸ್ನಲ್ಲಿ ತಿಳಿಸಿದ್ದಾರೆ.
ಜನವರಿ 26 ರಂದು ನಡೆದ ಈ ಹಿಂಸಾಚಾರದಲ್ಲಿ ಯಾರೆಲ್ಲ ರೈತ ಮುಖಂಡರು ಭಾಗಿಯಾಗಿದ್ದಾರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ ಹೇಳಿದ್ದಾರೆ.
ಇನ್ನು ಟ್ರ್ಯಾಕ್ಟರ್ ಪೆರೇಡ್ಗೆ ನಿಗದಿಪಡಿಸಿದ ಷರತ್ತುಗಳ ಉಲ್ಲಂಘನೆಯನ್ನೂ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
"ರ್ಯಾಲಿಗಾಗಿ ನಿರ್ಧರಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿದರೂ, ನೀವು ಮತ್ತು ಇತರ ರೈತ ಮುಖಂಡರು ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದ್ದೀರಿ" ಎಂದು ಪೊಲೀಸರು ರೈತ ಮುಖಂಡರಿಗೆ ನೀಡಿದ ನೋಟಿಸ್ನಲ್ಲಿ ತಿಳಿಸಿದ್ದಾರೆ.