ನವದೆಹಲಿ, ಜ. 28 (DaijiworldNews/HR): ಫ್ರಾನ್ಸ್ನ ಡಾಸೊ ಏವಿಯೇಶನ್ ಕಂಪನಿ ನಿರ್ಮಿಸಿರುವ ಮೂರು ರಫೇಲ್ ಯುದ್ಧ ವಿಮಾನಗಳು ಬುಧವಾರದಂದು ಭಾರತಕ್ಕೆ ಆಗಮಿಸಿದ್ದು, ಗುಜರಾತ್ನ ಜಾಮ್ನಗರ್ ವಾಯುನೆಲೆಗೆ ಬಂದಿಳಿದಿವೆ.
ಈ ಕುರಿತು ಟ್ವೀಟ್ ಮಾಡಿರುವ ಭಾರತೀಯ ವಾಯುಸೇನೆಯು, "ಮೂರನೇ ಹಂತದಲ್ಲಿ ಮೂರು ರಫೇಲ್ ಯುದ್ಧವಿಮಾನಗಳು ಐಎಎಫ್ ವಾಯುನೆಲೆಗೆ ಬಂದಿಳಿದಿದ್ದು, ಅವುಗಳು ತಡೆರಹಿತವಾಗಿ 7000 ಕಿ.ಮೀ ದೂರ ಕ್ರಮಿಸಿ ಇಲ್ಲಿಗೆ ತಲುಪಿವೆ. ಯುಎಇಯಲ್ಲಿರುವ ಫ್ರಾನ್ಸ್ನ ವಾಯುನೆಲೆಯಲ್ಲಿ ಇಂಧನ ತುಂಬಿಸಿಕೊಳ್ಳುವುದಕ್ಕಾಗಿ ಒಂದು ಬಾರಿ ನಿಲುಗಡೆ ಮಾಡಲಾಗಿದೆ. ಯುಎಇ ವಾಯುಪಡೆಯು ಒದಗಿಸಿದ ಟ್ಯಾಂಕರ್(ಇಂಧನ) ಬೆಂಬಲವನ್ನು ಭಾರತೀಯ ವಾಯುಪಡೆ ಪ್ರಶಂಸಿಸುತ್ತದೆ" ಎಂದು ಹೇಳಿದೆ.
ಇನ್ನು ಫ್ರಾನ್ಸ್ನ ಡಾಸೊ ಏವಿಯೇಶನ್ ಕಂಪನಿ ನಿರ್ಮಿಸಿರುವ ರಫೇಲ್ ಯುದ್ಧವಿಮಾನಗಳನ್ನು ಕಳೆದ ವರ್ಷ ಸೆಪ್ಟಂಬರ್ 10ರಂದು ವಾಯುಪಡೆಗೆ ಸೇರ್ಪಡೆಗೊಳಿಸಲಾಗಿದ್ದು, ಎರಡನೇ ಹಂತದ ರಫೇಲ್ ಯುದ್ಧ ವಿಮಾನಗಳು ನವೆಂಬರ್ನಲ್ಲಿ ಭಾರತಕ್ಕೆ ಬಂದಿದ್ದು, ಇದೀಗ ಮತ್ತೆ ಮೂರು ರಫೇಲ್ ಯುದ್ಧ ವಿಮಾನಗಳು ಬಂದಿಳಿದಿವೆ.