ಉಜಿರೆ, ಜ 27 (DaijiworldNews/SM): ಇಲ್ಲಿನ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣ ಸಿಬಿಐ ಮರು ತನಿಖೆಗೆ ಕೋರಿ ಮೃತ ವಿದ್ಯಾರ್ಥಿನಿಯ ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದು, ಹೈಕೋರ್ಟ್ ಏಕಸದಸ್ಯ ಪೀಠ ಅವರ ಅರ್ಜಿ ತಿರಸ್ಕರಿಸಿದೆ.
ಪ್ರಕರಣವನ್ನು ಸಿಬಿಐಗೆ ಮರು ತನಿಖೆಗೆ ವಹಿಸಬೇಕು ಎಂದು ಕೋರಿ ಸೌಜನ್ಯ ತಂದೆ ಚಂದಪ್ಪಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ಪರಿಶೀಲನೆ ನಡೆಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಆದೇಶ ಹೊರಡಿಸಿದ್ದು, ಅರ್ಜಿ ತಿರಸ್ಕರಿಸಿದೆ.
ಇನ್ನು ಈ ಹಿಂದೆ ಪ್ರಕರಣವನ್ನು ಸ್ಥಳೀಯ ಪೊಲೀಸರು ವಿಚಾರಣೆ ನಡೆಸಿದ್ದರು. ಅಲ್ಲದೆ, ಸಿಐಡಿ ತನಿಖೆ ನಡೆಸಿತ್ತು. ಬಳಿಕ ಸಿಬಿಐ ತನಿಖೆ ಕೂಡ ಮಾಡಲಾಗಿದೆ. ತನಿಖೆಯಲ್ಲಿ ಸಂತೋಷ್ ರಾವ್ ವಿರುದ್ಧ ಸಿಬಿಐ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಸಂತೋಷ್ ರಾವ್ ಕೃತ್ಯ ಎಸಗಿರುವುದು ದೃಢಪಟ್ಟಿದೆ. ಈ ಸಂಬಂಧ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ. ಒಮ್ಮೆ ಸಿಬಿಐ ತನಿಖೆ ನಡೆಸಿರುವ ಪ್ರಕರಣವನ್ನು ಮರು ತನಿಖೆಗೆ ವಹಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.