ಮಂಗಳೂರು, ಜ 27 (DaijiworldNews/SM): ಹುತಾತ್ಮರಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್) ಯೋಧ ಉದಯ ಕುಮಾರ್ ಅವರ ಪತ್ನಿಯ ಆಸ್ತಿಯನ್ನು ಕಾನೂನುಬಾಹಿರವಾಗಿ ವಂಚಿಸಿರುವ ಪ್ರಕರಣ ಪತ್ತೆಯಾಗಿದ್ದು, ನ್ಯಾಯಕ್ಕಾಗಿ ಹುತಾತ್ಮ ಯೋಧ ಉದಯ ಕುಮಾರ್ ಅವರ ಪತ್ನಿ ಮಂಗಳೂರಿನಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಗೂ ನ್ಯಾಯಕ್ಕಾಗಿ ಮಾಧ್ಯಮಗಳ ಮುಂದೆ ಕಣ್ಣೀರು ಸುರಿಸಿದ್ದಾರೆ.
ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ನೊಂದ ಮಹಿಳೆಯ ಪರ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘ, ಬರ್ಕೆ ಫ್ರೆಂಡ್ಸ್, ದೇರೆಬೈಲು ಕೊಂಚಾಡಿ ಯುವಕ ಮಂಡಲ, ಜನಶಕ್ತಿ ಸೇವಾ ಟ್ರಸ್ಟ್, ಪಿ.ಎಸ್. ವಿಲ್ಲಿ, ವಿಲ್ಸನ್ ಮತ್ತು ಬೊಲ್ಪುಗುಡ್ಡೆ ನಿವಾಸಿಗಳ ಹೋರಾಟ ಸಮಿತಿಯು ನೊಂದ ಮಹಿಳೆಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದೆ.
2016ರ ಆಗಸ್ಟ್ 2ರಂದು ಹುತಾತ್ಮರಾಗಿದ್ದು, ಅವರ ಪತ್ನಿ ವಸಂತಿಯವರು ಪತಿಯ ಪರಿಹಾರದ ಹಣದಿಂದ ಹೆತ್ತವರ ನಾಲ್ಕು ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿ ಮೇಲಿನ ಮಹಡಿಯನ್ನು ಬಾಡಿಗೆಗೆ ನೀಡಿ ಅದರ ಆದಾಯದಲ್ಲಿ ಜೀವನ ನಡೆಸುತ್ತಿದ್ದರು. ಈ ವೇಳೆ ಅವರ ಮನೆಗೆ ಬಾಡಿಗೆಗೆ ವಾಸ ಮಾಡಲು ಬಂದ ಸುನಿಲ್ ಕುಮಾರ್ ಹಾಗೂ ಮಮತಾ ದಂಪತಿ ಬಾಡಿಗೆಯ ಕರಾರು ಪತ್ರ ಮಾಡಿಸುವ ನೆಪದಲ್ಲಿ ಮನೆಯ ಮಹಡಿಯ ಹಕ್ಕನ್ನು ತಮ್ಮ ಹೆಸರಿಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಿಕೊಂಡಿದ್ದರು.
ಇದಲ್ಲದೆ ಸುನಿಲ್ ಕುಮಾರ್ ವಸಂತಿಯವರ ಅನಾರೋಗ್ಯವನ್ನು (ಹೈಪರ್ ಥೈರಾಯ್ಡಾ) ಮುಂದಿಟ್ಟುಕೊಂಡು ಅವರಿಂದ ಐದು ಪವನಿನ ಎರಡು ಬಂಗಾರದ ಬಳೆ ಹಾಗೂ ನಗದು ಹಣನ್ನೂ ಪಡೆದು ಮೋಸ ಮಾಡಿದ್ದಾನೆ. ವಸಂತಿಯವರ ಕಾಯಿಲೆಯನ್ನು ಆಸ್ಪತ್ರೆಗೆ ಹೋಗದೆ ಗುಣಪಡಿಸುವುದಾಗಿ ನಂಬಿಸಿದಲ್ಲದೆ. ವಸಂತಿಯವರ ಹೆಸರಿನಲ್ಲಿ ಬ್ಯಾಂಕ್ ಸಾಲ ಮಾಡಿ ತನ್ನ ಮನೆ ರಿಪೇರಿ ಮಾಡಿಸಿಕೊಂಡಿದ್ದಾನೆ. ಮಾತ್ರವಲ್ಲದೆ 2016ರಿಂದ ಈವರೆಗೆ ಮನೆ ಬಾಡಿಗೆಯನ್ನೂ ನೀಡದೆ ಸತಾಯಿಸಿದ್ದಾನೆ.