ಬೆಂಗಳೂರು, ಜ 27 (DaijiworldNews/SM): ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಗುರುವಾರದಿಂದ ಪ್ರಾರಂಭವಾಗಲಿದೆ. ವಿಧಾನಮಂಡಲ ಅಧಿವೇಶನ ಆಡಳಿತ ಹಾಗೂ ಪ್ರತಿಪಕ್ಷಗಳು ಪರಸ್ಪರ ವಾಕ್ಸಮರಕ್ಕೆ ಕಾರಣವಾಗಲಿದೆ. ಕೆಲವು ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಕಾರ್ಯತಂತ್ರ ರೂಪಿಸಿವೆ.
15ನೇ ವಿಧಾನಸಭೆಯ 9ನೇ ಅಧಿವೇಶನ ಇದಾಗಿದೆ. ಕೋವಿಡ್ 19ರಿಂದಾಗಿ ಸಂಪನ್ಮೂಲ ಕ್ರೋಢೀಕರಣದಲ್ಲಿ ಹಿನ್ನೆಡೆ, ಅಭಿವೃದ್ಧಿ ಕಾರ್ಯಕ್ರಮಗಳ ಕುಂಠಿತ, ಕ್ಷೇತ್ರಗಳಿಗೆ ಸಮರ್ಪಕವಾಗಿ ಅನುದಾನ ಬಿಡುಗಡೆ ವಿಚಾರಗಳು ಪ್ರಮುಖವಾಗಿದ್ದು, ಇದರ ಜೊತೆಗೆ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕಾಗಿ ನಡೆದ ಕಿತ್ತಾಟ ಚರ್ಚೆಯ ಪ್ರಮುಖ ವಿಚಾರಗಳಾಗಲಿವೆ.
ಸಚಿವ ಸಂಪುಟ ವಿಸ್ತರಣೆ, ವಲಸಿಗ ಮತ್ತು ಮೂಲ ಬಿಜೆಪಿ ನಾಯಕರ ನಡುವೆ ಆಂತರಿಕ ಕಿತ್ತಾಟ. ಖಾತೆಗಳಿಗಾಗಿ ಬಹಿರಂಗ ಗುದ್ದಾಟದ ವಿಚಾರಗಳು ಅಧಿವೇಶನದಲ್ಲಿ ಬಹಿರಂಗವಾಗಿ ಚರ್ಚೆಗೆ ಬರುವ ಸಂಭವವಿದೆ. ಜ.28 ರಿಂದ ಫೆ.5ರವರೆಗೆ ಒಟ್ಟು 7 ದಿನಗಳ ಅಧಿವೇಶನ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿದೆ.