ಬೆಂಗಳೂರು, ಜ.27 (DaijiworldNews/PY): "ಬಿಜೆಪಿಯ ಕೆಲ ಹರಕುಬಾಯಿಯ ನಾಯಕರು ದೆಹಲಿಯ ರೈತ ಪ್ರತಿಭಟನೆಯಲ್ಲಿ ಭಯೋತ್ಪಾದಕರು ಭಾಗಿಯಾಗಿದ್ದಾರೆ ಎಂದು ಹೇಳುವ ಮೂಲಕ ಚಳವಳಿಯ ಮೇಲೆ ಕಳಂಕ ತರುವ ಯತ್ನ ಮಾಡುತ್ತಿದ್ದಾರೆ" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಟಿರುವ ಅವರು, "ದೆಹಲಿಯಲ್ಲಿ ನಡೆದ ರೈತ ಚಳವಳಿಯ ಘರ್ಷಣೆಯ ಆರೋಪವನ್ನು ರೈತರ ಮೇಲೆ ಕಟ್ಟುವ ವ್ಯವಸ್ಥಿತ ಸಂಚು ನಡೆಸಲಾಗುತ್ತಿದೆ. ಆದರೆ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ್ದ ದೀಪು ಸಿಧು ಯಾರು? ಆತನಿಗೂ ಬಿಜೆಪಿಗೂ ಏನು ಸಂಬಂಧ ಎಂಬುದನ್ನು ದೇಶವೇ ನೋಡಿದೆ. ಕೃತ್ಯದ ಕುರಿತು ಮೊದಲು ತನಿಖೆ ನಡೆಸಲಿ. ದಂಗೆಗೆ ಕಾರಣವಾದ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ" ಎಂದು ಆಗ್ರಹಿಸಿದ್ದಾರೆ.
"ಬಿಜೆಪಿಯ ಕೆಲ ಹರಕುಬಾಯಿಯ ನಾಯಕರು ದೆಹಲಿಯ ರೈತ ಪ್ರತಿಭಟನೆಯಲ್ಲಿ ಭಯೋತ್ಪಾದಕರು ಭಾಗಿಯಾಗಿದ್ದಾರೆ ಎಂದು ಹೇಳುವ ಮೂಲಕ ಚಳವಳಿಯ ಮೇಲೆ ಕಳಂಕ ತರುವ ಯತ್ನ ಮಾಡುತ್ತಿದ್ದಾರೆ. ಅಧಿಕಾರದಲ್ಲಿರುವ ಬಿಜೆಪಿ ನಾಯಕರಿಗೆ ಭಯೋತ್ಪಾದಕರ ಬಗ್ಗೆ ಮೊದಲೇ ಖಚಿತ ಮಾಹಿತಿ ಇದ್ದಿದ್ದರೆ ಭಯೋತ್ಪಾದಕರು ರೈತ ಪ್ರತಿಭಟನೆಯಲ್ಲಿ ಸೇರದಂತೆ ತಡೆಯಬಹುದಿತ್ತಲ್ಲವೆ?" ಎಂದು ಪ್ರಶ್ನಿಸಿದ್ದಾರೆ.
"ಏನೇ ಆದರೂ ದೆಹಲಿಯಲ್ಲಿ ನಡೆದ ಹಿಂಸಾತ್ಮಕ ಕೃತ್ಯವನ್ನು ಒಪ್ಪಲು ಸಾಧ್ಯವಿಲ್ಲ. ದೆಹಲಿಯಲ್ಲಿ ನಡೆದ ಘಟನೆ ಭಾರತದ ಘನತೆಗಾದ ಕಪ್ಪುಚುಕ್ಕೆ. ಹಿಂಸಾತ್ಮಕ ಕೃತ್ಯದಲ್ಲಿ ಭಾಗಿಯಾದವರಿಗೆ ಖಂಡಿಯವಾಗಿಯೂ ಶಿಕ್ಷೆಯಾಗಲೇಬೇಕು. ಆದರೆ ತಪ್ಪಿತಸ್ಥರು ಯಾರು ಎಂದು ತಿಳಿಯುವ ಮೊದಲೇ ರೈತರ ಮೇಲೆ ಆರೋಪಿಸುವ ಧೂರ್ತ ಪ್ರವೃತ್ತಿಯನ್ನು ಬಿಜೆಪಿ ನಾಯಕರು ಬಿಡಬೇಕು" ಎಂದಿದ್ದಾರೆ.
"ಕೈಯಿಂದ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರು ಎಂಬಂತೆ ಕೇಂದ್ರ ಸರ್ಕಾರ ರೈತರ ನ್ಯಾಯಸಮ್ಮತ ಬೇಡಿಕೆಯನ್ನು ಮಾತುಕತೆಯ ಮೂಲಕವೇ ಬಗೆಹರಿಸಬಹುದಿತ್ತು. ಆದರೆ ಪ್ರಾರಂಭದಿಂದಲೂ ರೈತ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸವನ್ನು ಕೇಂದ್ರ ಮಾಡಿದೆ. ಕೃಷಿ ಕಾಯ್ಧೆ ಕೇಂದ್ರಕ್ಕೆ ಪ್ರತಿಷ್ಠೆಯಾಗಿರಬಹುದು. ಆದರೆ ರೈತರಿಗೆ ಇದು ಬದುಕಿನ ಪ್ರಶ್ನೆ" ಎಂದು ಹೇಳಿದ್ದಾರೆ.