ನವದೆಹಲಿ, ಜ.27 (DaijiworldNews/PY): "ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ದಾರಿ ತಪ್ಪಿಸಿದ ನಟ ಹಾಗೂ ಬಿಜೆಪಿ ಕಾರ್ಯಕರ್ತ ದೀಪ್ ಸಿಧು ಹಾಗೂ ನನಗೂ ಯಾವುದೇ ರೀತಿಯಾದ ಸಂಬಂಧವಿಲ್ಲ" ಎಂದು ಬಿಜೆಪಿ ಸಂಸದ ಸನ್ನಿ ಡಿಯೋಲ್ ತಿಳಿಸಿದ್ದಾರೆ.
ಜ.26ರ ಗುರುವಾರದಂದು ನಡೆದ ಗಣರಾಜ್ಯೋತ್ಸವದಂದು ರೈತರ ಟ್ಯ್ರಾಕ್ಟರ್ ಪರೇಡ್ನ ಸಂದರ್ಭ ದೀಪ್ ಸಿಧು ಕೆಂಪು ಕೋಟೆಗೆ ನುಗ್ಗಿ , ಸಿಖ್ ಧ್ವಜವನ್ನು ಹಾರಿಸುವಂತೆ ಓರ್ವ ವ್ಯಕ್ತಿಗೆ ಧ್ವಜ ಹಸ್ತಾಂತರಿಸುವ ವಿಡಿಯೋ ವೈರಲ್ ಆಗಿದೆ.
ರೈತ ಮುಖಂಡರು ದೀಪ್ ಸಿಧು ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, "ಅವರಿಗೆ ರಾಜಕೀಯ ನಂಟಿದೆ. ಅವರು ಬಿಜೆಪಿ ಕಾರ್ಯಕರ್ತ" ಎಂದಿದ್ದಾರೆ.
ಕೆಂಪುಕೋಟೆಗೆ ಮುತ್ತಿಗೆ ಹಾಕಿದ ನಂತರ, ದೀಪ್ ಸಿಧು ಅವರು ಆ ವಿಡಿಯೋವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು, "ನಾನು ನನ್ನ ಬೆಂಬಲಿಗರು ರಾಷ್ಟ್ರಧ್ವಜವನ್ನು ತೆಗೆದುಹಾಕಿಲ್ಲ. ಆದರೆ, ಕೆಂಪುಕೋಟೆಯ ಮೇಲೆ ನಿಶಾನ್ ಸಾಹಿಬ್ ಧ್ವಜವನ್ನು ಹಾರಿಸಿದ್ದೇವೆ" ಎಂದು ತಿಳಿಸಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಭಾರತೀಯ ಕಿಸಾನ್ ಯೂನಿಯನ್ ರಾಕೇಶ್ ವಕ್ತಾರ ರಾಕೇಶ್ ಟಿಕೈಟ್, "ದೀಪ್ ಸಿಧು ಸಿಖ್ ಅಲ್ಲ. ಅವರು ಬಿಜೆಪಿ ಕಾರ್ಯಕರ್ತ" ಎಂದಿರುವ ಅವರು, ಸಿಧು ಅವರು ಬಿಜೆಪಿ ಸಂಸದ ಸನ್ನಿ ಡಿಯೋಲ್ ಮತ್ತು ಪ್ರಧಾನಿ ಮೋದಿ ಅವರೊಂದಿಗೆ ಇರುವ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ.
ಈ ವಿಚಾರದ ಬಗ್ಗೆ ಬಿಜೆಪಿ ಸಂಸದ ಸನ್ನಿ ಡಿಯೋಲ್ ಟ್ವೀಟ್ ಮಾಡಿದ್ದು, "ಕೆಂಪುಕೋಟೆಯಲ್ಲಿ ನಡೆದ ಘಟನೆಯಿಂದ ಬಹಳ ಬೇಸರವಾಗಿದೆ. ನನಗೆ ಅಥವಾ ನನ್ನ ಕುಟುಂಬಕ್ಕೆ ದೀಪ್ ಸಿಧು ಜೊತೆ ಯಾವುದೇ ಸಂಬಂಧವಿಲ್ಲ ಎಂದು ಈಗಾಗಲೇ ನಾನು ಫೇಸ್ಬುಕ್ನಲ್ಲಿ ತಿಳಿಸಿದ್ದೇನೆ" ಎಂದಿದ್ದಾರೆ.
ಮಂಗಳವಾರ ರೈತರ ಗುಂಪು ಕೆಂಪುಕೋಟೆಯ ಆವರಣಕ್ಕೆ ಲಗ್ಗೆ ಇಟ್ಟಿದ್ದು, ರೈತನೋರ್ವ ಕೆಂಪುಕೋಟೆಯ ಮುಂಭಾಗದಲ್ಲಿರುವ ಧ್ವಜಸ್ತಂಭಕ್ಕೆ ಹತ್ತಿ ಅಲ್ಲಿ ಭಾರತೀಯ ಕಿಸಾನ್ ಯೂನಿಯನ್ನ ಧ್ವಜವನ್ನು ಹಾರಿಸಿದ್ದನು.