ತಿರುವನಂತಪುರ, ಜ.27 (DaijiworldNews/PY): ಆನ್ಲೈನ್ ರಮ್ಮಿ ಆಟಗಳ ಬ್ರಾಂಡ್ ಅಂಬಾಸಿಡರ್ ಆಗಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ನಟಿ ತಮನ್ನಾ ಹಾಗೂ ಮಲಯಾಳಂ ನಟ ಅಜು ವರ್ಗೀಸ್ ಅವರಿಗೆ ಕೇರಳ ಹೈಕೋರ್ಟ್ ನೋಟಿಸ್ ನೀಡಿದೆ.
ಆನ್ಲೈನ್ ರಮ್ಮಿ ಆಟಗಳನ್ನು ತಡೆಯಲು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಎಸ್.ಎಂ.ಕುಮಾರ್, ನ್ಯಾ.ಎಲ್.ಕೆ.ನರೇಂದ್ರನ್ ಅವರನ್ನೊಳಗೊಂಡ ಕೇರಳ ಹೈಕೋರ್ಟ್ನ ವಿಭಾಗೀಯ ಪೀಠ ಬುಧವಾರ ನೋಟಿಸ್ ನೀಡಿದ್ದು, ಈ ಬಗ್ಗೆ ಕೇರಳ ಸರ್ಕಾರದಿಂದ ಉತ್ತರ ಕೇಳಿದೆ.
"ಆನ್ಲೈನ್ ರಮ್ಮಿ ಆಟಗಳು ಹೆಚ್ಚು ಜನಪ್ರಿಯವಾಗುತ್ತಿದ್ದು, ಈ ಆಟಗಳನ್ನು ಕಾನೂನುಬದ್ಧವಾಗಿ ನಿಷೇಧಿಸಬೇಕು. ಈಗಾಗಲೇ ಇತರ ರಾಜ್ಯಗಳು ಇವುಗಳನ್ನು ನಿಷೇಧ ಮಾಡಿವೆ. ಕೇರಳದಲ್ಲಿ 1960ರ ಕಾನೂನು ಇದೆ. ಆದರೆ, ಬೇರೆ ಯಾವುದೇ ಕಾನೂನುಗಳನ್ನು ಕೈಗೊಂಡಿಲ್ಲ" ಎಂದು ತ್ರಿಶೂರ್ ಮೂಲದ ಪೌಲಿ ವಡಕ್ಕನ್ ಎಂಬವರು ಆರೋಪಿಸಿದ್ದು, ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು.
"ಆನ್ಲೈನ್ ರಮ್ಮಿ ವಿಷಯಗಳನ್ನು ಮಾತ್ರ ಇದು ಒಳಗೊಂಡಿಲ್ಲ. ಬ್ರಾಂಡ್ ರಾಯಭಾರಿಗಳಾಗಿರುವ ಸ್ಟಾರ್ಗಳು ಪ್ರೇಕ್ಷಕರನ್ನು ಆಕರ್ಷಿಸಿದ್ದು, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ. ಆನ್ಲೈನ್ ರಮ್ಮಿಯಂತಹ ಆಟಗಳು ಜೂಜಾಟದಂತೆ ಇದೆ" ಎಂದಿದ್ದಾರೆ.
ಬ್ರಾಂಡ್ ರಾಯಭಾರಿಗಳು, ರಾಜ್ಯ ಸರ್ಕಾರ, ರಾಜ್ಯ ಐಟಿ ಇಲಾಖೆ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾಹಾಗೂ ಆನ್ಲೈನ್ ರಮ್ಮಿ ಆಟಗಳನ್ನು ನಡೆಸುವ ಎರಡು ಖಾಸಗಿ ಸಂಸ್ಥೆಗಳ ಹೆಸರನ್ನು ಅರ್ಜಿದಾರ ಉಲ್ಲೇಖಿಸಿದ್ದಾರೆ.