ಮುಂಬೈ, ಜ.27 (DaijiworldNews/MB) : ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿನ ಮರಾಠಿ ಮಾತನಾಡುವ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ.
ಮಲಬಾರ್ ಬೆಟ್ಟದ ಸಹ್ಯಾದ್ರಿ ಅತಿಥಿಗೃಹದಲ್ಲಿ ಡಾ.ದೀಪಕ್ ಪವಾರ್ ಬರೆದ ಮರಾಠಿಯಲ್ಲಿ ಇರುವ ಮಹಾರಾಷ್ಟ್ರ ಕರ್ನಾಟಕ ಸೀಮಾವಾದ್: ಸಂಘರ್ಷ್ ಅನಿ ಸಂಕಲ್ಪ್ (ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ: ಹೋರಾಟ ಮತ್ತು ಪ್ರತಿಜ್ಞೆ) ಹೆಸರಿನ 530 ಪುಟಗಳ ಕೃತಿಯನ್ನು ಬಿಡುಗಡೆ ಮಾಡಿದ ಬಳಿಕ ಠಾಕ್ರೆ ಮಾತನಾಡಿದರು. ಎನ್ಸಿಪಿ ನಾಯಕ ಶರದ್ ಪವಾರ್ ಒಳಗೊಂಡಂತೆ ಮಹಾರಾಷ್ಟ್ರ ಉನ್ನತ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
''ಮಹಾರಾಷ್ಟ್ರ-ಕರ್ನಾಟಕ ಗಡಿ ಸಮಸ್ಯೆಯನ್ನು ಬಗೆಹರಿಸಲು ನಿರ್ಧಿಷ್ಟವಾದ ಚೌಕಟ್ಟಿನಡಿಯಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಈವರೆಗೆ ಆಗಿರುವುದು ಆಗಿ ಹೋಗಿದೆ. ಆದರೀಗ ನಾವೆಲ್ಲರೂ ಗೆಲುವಿಗಾಗಿ ಹೋರಾಡಬೇಕು'' ಎಂದು ಕರೆ ನೀಡಿದ ಠಾಕ್ರೆ, ''ಈಗ ಈ ವಿಚಾರ ಸುಪ್ರೀಂಕೋರ್ಟ್ನಲ್ಲಿದೆ. ಹಾಗಿರುವಾಗ ಕರ್ನಾಟಕದ ಕೆಲವು ವರ್ತನೆಯು ನ್ಯಾಯಾಂಗ ನಿಂದನೆಗೆ ಸಮ. ಅವರು ಬೆಳಗಾಂ ಹೆಸರನ್ನು ಬದಲಾಯಿಸಿದ್ದಾರೆ. ಬೆಳಗಾವಿ ಎಂದು ಹೆಸರಿಟ್ಟು ಅದನ್ನು ಎರಡನೇ ರಾಜಧಾನಿಯನ್ನಾಗಿ ಬೇರೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ವಿಧಾನ ಸೌಧವನ್ನು ನಿರ್ಮಿಸಿ ಅಧಿವೇಶನವನ್ನು ನಡೆಸಿದ್ದಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.