ಬೆಂಗಳೂರು, ಜ.27 (DaijiworldNews/PY): ಮಧ್ಯವರ್ತಿಗಳ ಹಾವಳಿಯಿಲ್ಲದೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು, ಪಿಂಚಣಿಗಾಗಿ ಫಲಾನುಭವಿಗಳ ಕಷ್ಟ ತಪ್ಪಿಸುವ ಸಲುವಾಗಿ 'ಮನೆ ಬಾಗಿಲಿಗೆ ಮಾಸಾಶನ’ ಅಭಿಯಾನವನ್ನು ಬುಧವಾರ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಚಾಲನೆ ನೀಡಿದರು.
ಈ ಸಂದರ್ಭ ಅವರು 'ನವೋದಯ' ಆ್ಯಪ್ ಮತ್ತು ತಂತ್ರಾಂಶವನ್ನು ಲೋಕಾರ್ಪಣೆ ಮಾಡಿದರು.
ಬಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, "ಮಧ್ಯವರ್ತಿಗಳ ಹಾವಳಿಯಿಲ್ಲದೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು, ಪಿಂಚಣಿಗಾಗಿ ಫಲಾನುಭವಿಗಳ ಕಷ್ಟ ತಪ್ಪಿಸುವ ಸಲುವಾಗಿ ಈ ಅಭಿಯಾನವನ್ನು ಆರಂಭ ಮಾಡಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವೂ ಆಗಿದೆ. ಫಲಾನುಭವಿಗಳು ಇಷ್ಟು ದಿನ ಪಿಂಚಣಿಗಾಗಿ ತುಂಬಾ ಕಷ್ಟಪಡುತ್ತಿದ್ದರು. ಇದೀಗ ಅದನ್ನು ತಪ್ಪಿಸುವ ಸಲುವಾಗಿ ಸರ್ಕಾರ ಮಹತ್ವದ ಯೋಜನೆಯನ್ನು ಜಾರಿ ಮಾಡಿದೆ" ಎಂದು ಹೇಳಿದರು.
"ಪಿಂಚಣಿಗೋಸ್ಕರ ಜನರು ಸರ್ಕಾರಿ ಕಚೇರಿಗೆ ತೆರಳಿ, ಅಧಿಕಾರಿಗಳ ಬಳಿ ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಈ ಹಿಂದಿತ್ತು. ಇನ್ನು ಮುಂದೆ ಮಧ್ಯವರ್ತಿಗಳು ಇಲ್ಲದೇ ಅರ್ಹ ಫಲಾನುಭವಿಗಳಿಗೆ ಪಿಂಚಣಿ ನೇರವಾಗಿ ಅವರ ಬ್ಯಾಂಕ್ ಖಾತೆಗೆ ತಲುಪಲಿದೆ" ಎಂದು ತಿಳಿಸಿದರು.
"ವೃದ್ಧಾಪ್ಯ ವರ್ಗಕ್ಕೆ ಮೊದಲ ಹಂತದಲ್ಲಿ ಯೋಜನೆ ಜಾರಿ ಮಾಡಲಾಗಿದ್ದು, ವಿಧವೆಯರು, ಅಂಗವಿಕಲರು ಸೇರಿದಂತೆ ಉಳಿದ ಎಲ್ಲ ಪಿಂಚಣಿದಾರರಿಗೆ ಎರಡನೇ ಹಂತದಲ್ಲಿ ಜಾರಿ ಮಾಡಲು ಕ್ರಮ ಕೈಗೊಳ್ಳಲಿದ್ದೇವೆ" ಎಂದು ಹೇಳಿದರು.
ಈ ವೇಳೆ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, "ಈಗಾಗಲೇ ಉಡುಪಿ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿ ಮಾಡಿದ್ದೇವೆ. ಅದು ಯಶಸ್ವಿಯಾದ ನಂತರ ರಾಜ್ಯಾದ್ಯಂತ ಜಾರಿ ಮಾಡುತ್ತಿದ್ದೇವೆ. ನೂತನ ತಂತ್ರಜ್ಞಾನದ ಮುಖೇನ ಪಿಂಚಣಿ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ" ಎಂದರು.
"ಈ ಯೋಜನೆ ಇಷ್ಟು ವರ್ಷ ಏಕೆ ಜಾರಿಗೆ ಬಂದಿಲ್ಲ ಎಂದು ಆಶ್ಚರ್ಯವಾಗಿತ್ತು. ಈ ಯೋಜನೆಯನ್ನು ಈ ಹಿಂದೆ ಇದ್ದ ಸರ್ಕಾರ ಜಾರಿಗೆ ತರಬೇಕಿತ್ತು. ಆದರೆ, ಅವರು ಇದರ ಬಗ್ಗೆ ಗಮನಹರಿಸಿಲ್ಲ. ಇದೀಗ ಈ ಯೋಜನೆಯನ್ನು ನಾವು ಜಾರಿಗೆ ತಂದಿದ್ದೇವೆ" ಎಂದು ಹೇಳಿದರು.