ನವದೆಹಲಿ, ಜ.27 (DaijiworldNews/PY): ಬುಧವಾರ ಕೆಂಪುಕೋಟೆಗೆ ಭೇಟಿ ನೀಡಿದ ಕೇಂದ್ರದ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ಅವರು ರೈತರ ಮುತ್ತಿಗೆ ಸಂದರ್ಭ ಉಂಟಾದ ಹಾನಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ನಂತರ ಮಾತನಾಡಿದ ಅವರು, "ಈ ಘಟನೆಯ ವಿಚಾರದ ಬಗ್ಗೆ ಏನೂ ಹೇಳಲು ಬಯಸುವುದಿಲ್ಲ. ಘಟನೆಗೆ ಸಂಬಂಧಪಟ್ಟಂತೆ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ" ಎಂದಿದ್ದಾರೆ.
ಪ್ರಹ್ಲಾದ್ ಪಟೇಲ್ ಅವರೊಂದಿಗೆ ಸಂಸ್ಕೃತ ಸಚಿವಾಲಯದ ಕಾರ್ಯದರ್ಶಿ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯ ಅಧಿಕಾರಿಗಳು ಬುಧವಾರ ಕೆಂಪುಕೋಟೆಗೆ ಭೇಟಿ ನೀಡಿದ್ದರು. ಈ ಸಂದರ್ಭ ಅವರು, ಕೆಂಪುಕೋಟೆಯ ಮೆಟಲ್ ಡಿಟೆಕ್ಟರ್ ಗೇಟ್ ಹಾಗೂ ಟಿಕೆಟ್ ಕೌಂಟರ್ ಹಾನಿಯಾಗಿರುವುದನ್ನು ಗಮನಿಸಿದ್ದಾರೆ.
ಪ್ರಹ್ಲಾದ್ ಪಟೇಲ್ ಅವರು ಈ ಹಿಂದೆ ಪ್ರತಿಭಟನಾನಿರತ ರೈತರ ನಡೆಗೆ ಖಂಡನೆ ವ್ಯಕ್ತಪಡಿಸಿದ್ದು, "ಕೆಂಪುಕೋಟೆಯ ಮೇಲೆ ನಡೆದ ರೈತರ ಮುತ್ತಿಗೆಯು ಪ್ರಜಾಪ್ರಭುತ್ವದ ಘನತೆಗೆ ಧಕ್ಕೆ ತಂದಿದೆ" ಎಂದಿದ್ದರು.