ನವದೆಹಲಿ, ಜ.27 (DaijiworldNews/MB) : ದೆಹಲಿಯಲ್ಲಿ ಮಂಗಳವಾರ ಟ್ಯ್ರಾಕ್ಟರ್ ರ್ಯಾಲಿ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು 200 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಸ್ತುತ 200 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ಬಳಿಕ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಈ ಹಿಂಸಾಚಾರಕ್ಕೆ ಸಂಬಂಧಿಸಿ ಈವರೆಗೆ 22 ಎಫ್ಐಆರ್ ದಾಖಲಾಗಿದೆ.
ಇನ್ನು ದೆಹಲಿ ಪೊಲೀಸರು ಇಂದು ಸಂಜೆ 4 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದು, ನಿನ್ನೆ ರೈತರ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಆಗ್ರಹಿಸಿ ಕಳೆದ ಒಂದೂವರೆ ತಿಂಗಳಿಗೂ ಅಧಿಕ ಕಾಲದಿಂದ ದೆಹಲಿಯ ಹಲವು ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಲಿರುವ ರೈತರು ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ರ್ಯಾಲಿ ನಡೆಸಿದ್ದು ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ಭಾರೀ ಸಂಘರ್ಷ ಉಂಟಾಗಿತ್ತು. ಹಲವಾರು ಮಂದಿ ಗಾಯಗೊಂಡಿದ್ದು ಈ ಬಗ್ಗೆ ಪೊಲೀಸರು 7 ಎಫ್ಐಆರ್ ದಾಖಲಿಸಿದ್ದಾರೆ. ಇನ್ನು ರೈತರ ಕೆಲ ಗುಂಪು ಭಾರತದ ಐತಿಹಾಸಿಕ ಸ್ಮಾರಕ ಕೆಂಪುಕೋಟೆಯ ಆವರಣದಲ್ಲಿ ತಮ್ಮ ಸಂಘದ ಧ್ವಜವನ್ನು ಹಾರಿಸಿದ್ದರು. ಇನ್ನು ಈ ಹಿಂಸಾಚಾರದ ವೇಳೆ 86 ಪೊಲೀಸರು ಗಾಯಗೊಂಡಿದ್ದು ಓರ್ವ ರೈತ ಟ್ಯ್ರಾಕ್ಟರ್ ಮಗುಚಿ ಸಾವನ್ನಪ್ಪಿದ್ದಾನೆ.