ನವದೆಹಲಿ, ಜ.27 (DaijiworldNews/PY): ಜ.26ರ ಮಂಗಳವಾರದಂದು ರೈತರ ಪ್ರತಿಭಟನೆ ರ್ಯಾಲಿ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆ ದೆಹಲಿಯ ಐಟಿಒ ಪ್ರದೇಶದಲ್ಲಿ ಇಂದು ಘಟನೆ ಖಂಡಿಸಿ ನಿವೃತ್ತ ಪೊಲೀಸ್ ಅಧಿಕಾರಿಗಳು ಪ್ರತಿಭಟನೆ ಕೈಗೊಂಡಿದ್ದು, ಸಂಚಾರ ಮತ್ತೆ ಅಸ್ತವ್ಯಸ್ತವಾಗಿದೆ.
ಮಂಗಳವಾರದಂದು ನಡೆದ ಹಿಂಸಾಚಾರದಲ್ಲಿ ಪಾಲ್ಗೊಂಡವರ ವಿರುದ್ದ ಸೂಕ್ತವಾದ ಕ್ರಮ ತೆಗೆದುಕೊಳ್ಳುವಂತೆ ಪ್ರತಿಭಟನಾ ನಿರತ ನಿವೃತ್ತ ಪೊಲೀಸ್ ಅಧಿಕಾರಿಗಳು ಒತ್ತಾಯಿಸಿದ್ದಾರೆ.
ಪ್ರತಿಭಟನೆಯ ಹಿನ್ನೆಲೆ ಮಿಂಟೋ ರಸ್ತೆಯಿಂದ ಕನಾಟ್ ಪ್ರದೇಶಕ್ಕೆ ತೆರಳುವ ಮಾರ್ಗ ಸೇರಿದಂತೆ ಐಟಿಒದಿಂದ ಇಂಡಿಯಾ ಗೇಟ್ಗೆ ತೆರಳುವ ಮಾರ್ಗವನ್ನು ಬಂದ್ ಮಾಡಲಾಗಿದ್ದು, ಗಾಜಿಪುರ್ ಮಾರುಕಟ್ಟೆ, ರಾಷ್ಟ್ರೀಯ ಹೆದ್ದಾರಿ 9 ಹಾಗೂ 24 ಅನ್ನು ಕೂಡಾ ಬಂದ್ ಮಾಡಲಾಗಿದೆ. ಇನ್ನು ದೆಹಲಿಯಿಂದ ಗಾಜಿಪುರ್ಗೆ ತೆರಳುವವರು ಶಬ್ದಾರ ಹಾಗೂ ಡಿಎನ್ಡಿ ಮೂಲಕ ತೆರಳಬೇಕು ಎಂದು ಸೂಚನೆ ನೀಡಲಾಗಿದೆ.
ರೈತರ ಟ್ಯ್ರಾಕ್ಟರ್ ರ್ಯಾಲಿ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ಈ ಸಂದರ್ಭ ಪೊಲೀಸರು ಹಾಗೂ ರೈತರ ನಡುವೆ ಸಂಘರ್ಷ ನಡೆದು ಪರಿಸ್ಥಿತಿ ಉದ್ವಿಗ್ನ ಸ್ಥಿತಿಗೆ ತಲುಪಿದೆ. ಈ ನಡುವೆ ಓರ್ವ ಪ್ರತಿಭಟನಾನಿರತ ರೈತ ಸಾವನ್ನಪ್ಪಿದ್ದು, ಹಲವು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದರು.