ದಾಂತೇವಾಡ, ಜ.27 (DaijiworldNews/MB) : ಹನ್ನೆರಡು ಮಹಿಳೆಯರು ಸೇರಿದಂತೆ ಒಟ್ಟು 24 ಮಂದಿ ನಕ್ಸಲರು ಛತ್ತೀಸಗಡದ ದಾಂತೇವಾಡ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ದಾಂತೇವಾಡದ ಪೊಲೀಸ್ ಅಧಿಕಾರಿ ಅಭಿಷೇಕ್ ಪಲ್ಲವ, ''ಗಣರಾಜ್ಯೋತ್ಸವದ ದಿನದಂದು ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಈ ಪೈಕಿ ಮೂವರ ಪತ್ತೆಗಾಗಿ ಸರ್ಕಾರ 1 ಲಕ್ಷ ನಗದು ಪುರಸ್ಕಾರ ಘೋಷಣೆ ಮಾಡಿತ್ತು'' ಎಂದು ತಿಳಿಸಿದರು.
''ಹಾಗೆಯೇ ಈ ನಕ್ಸಲರು ನಾವು ಮಾವೋವಾದಿಗಳ ತತ್ವಗಳಿಂದ ಹತಾಶರಾಗಿ ತಮಗೆ ಶರಣಾಗಿದ್ದೇವೆ. ಲೋನ್ ವರೋತ್ತು (ಮರಳಿ ಮನೆಗೆ) ಅಭಿಯಾನವು ನಾವು ಹಿಂಸೆ ತೊರೆಯಲು ಪ್ರೋತ್ಸಾಹ ನೀಡಿತು ಎಂದು ಹೇಳಿದ್ದಾರೆ. ಪ್ರಸ್ತುತ ಅವರಿಗೆ ತಲಾ 10,000 ನೆರವು ನೀಡಲಾಗಿದ್ದು ನಂತರ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ಯೋಜನೆಯಡಿ ಇನ್ನು ಹೆಚ್ಚಿನ ನೆರವು ನೀಡಲಾಗುತ್ತದೆ'' ಎಂದು ಹೇಳಿದರು.
ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಲು ಆರಂಭಿಸಿದ ಲೋನ್ ವರೋತ್ತು (ಮರಳಿ ಮನೆಗೆ) ಅಭಿಯಾನದಡಿಯಲ್ಲಿ ಈವರೆಗೆ ದಾಂತೇವಾಡ ಜಿಲ್ಲೆಯಲ್ಲಿ 272 ನಕ್ಸಲರು ಶರಣಾಗಿದ್ದಾರೆ ಎಂದು ವರದಿಯಾಗಿದೆ.