ಬೆಂಗಳೂರು, ಜ.27 (DaijiworldNews/PY): "ನನ್ನ ಜನ್ಮ ದಿನದಂದು ಯಾವುದೇ ಕಾರ್ಯಕರ್ತರು ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ಹಾಕಬೇಡಿ. ಆ ದಿನದಂದು ನಾನು ಇಲಾಖೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿರುತ್ತೇನೆ. ಯಾರೂ ಶುಭಾಶಯ ತಿಳಿಸಲು ಬರಬೇಡಿ" ಎಂಬುದಾಗಿ ಕಾರ್ಯಕರ್ತರಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಜ.28ರ ಗುರುವಾರದಂದು ನನ್ನ ಜನ್ಮದಿನವಿದ್ದು, ಈ ಮೂಲಕ ವಿನಂತಿಸುವುದೇನೆಂದರೆ ನನ್ನ ಜನ್ಮದಿನದಂದು ಯಾರೂ ಕೂಡಾ ಫ್ಲೆಕ್ಸ್, ಬ್ಯಾನರ್ಸ್, ಹೋರ್ಡಿಂಗ್ಸ್ ಹಾಕಬೇಡಿ. ಕೊರೊನಾ ಮುನ್ನೆಚ್ಚರಿಕ ಹಿನ್ನೆಲೆಯಲ್ಲಿ ಉಡುಗೊರೆ, ಶಾಲು, ಮಾಲೆ, ಹೂಗುಚ್ಚಗಳೊಂದಿಗೆ ಶುಭಾಶಯ ಕೋರಲು ಆಗಮಿಸಬಾರದೆಂದು ಮನವಿ ಮಾಡಿಕೊಳ್ಳುತ್ತೇನೆ" ಎಂದಿದ್ದಾರೆ.
"ಆ ದಿನದಂದು ನಾನು ಇಲಾಖೆಗಳ ಕಾರ್ಯಕ್ರಮಗಳ ನಿಮಿತ್ತ ಪ್ರವಾಸದಲ್ಲಿರುತ್ತೇನೆ. ಈ ಸಂಬಂಧ ಯಾವುದೇ ಚಟುವಟಿಕೆಗಳಿಗೆ ದುಂದು ವೆಚ್ಚಮಾಡದೇ ಅದೇ ಹಣದಿಂದ ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ಬಡಜನರ ಸೇವೆಗೈಯಿರಿ ಎಂದು ನನ್ನ ಎಲ್ಲಾ ಕಾರ್ಯಕರ್ತರು, ಸ್ನೇಹಿತರು ಹಾಗೂ ಹಿತೈಷಿಗಳಲ್ಲಿ ಕಳಕಳಿಯ ಮನವಿ ಮಾಡುತ್ತೇನೆ" ಎಂದು ತಿಳಿಸಿದ್ದಾರೆ.