ಬೆಂಗಳೂರು, ಜ.27 (DaijiworldNews/PY): ರೈತರ ಹೋರಾಟ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆ ದೆಹಲಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಬೆನ್ನಲ್ಲೇ ಮಾಜಿ ಸಚಿವ ಯು. ಟಿ ಖಾದರ್ ಟ್ವೀಟ್ ಮಾಡಿದ್ದು, "ಸಮಾಜವನ್ನ ನಿರ್ಲಕ್ಷಿಸಿದಾಗ ಅಧಃಪತನ ಆರಂಭ ಎಂಬ ಸ್ವಾಮಿ ವಿವೇಕಾನಂದರ ಮಾತನ್ನ ಈ ಸಂದರ್ಭದಲ್ಲಿ ನೆನಪಿಸಲು ಬಯಸುವೆ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ರೈತರು ದೆಹಲಿಯ ಬೀದಿ ಬೀದಿಗಳಲ್ಲಿ ಹೋರಾಟ ಮಾಡುತ್ತಿದ್ದಾರೆ. ಸಾವು ನೋವುಗಳು ಸಂಭವಿಸುತ್ತಿದ್ದು, ನಿಜಕ್ಕೂ ದುಃಖಕರ. ಅಂದು ಮಾತೆತ್ತಿದರೆ ಮನಮೋಹನ್ ಸಿಂಗರನ್ನು ಮೌನಿಬಾಬಾ ಎಂದು ಟೀಕಿಸುತ್ತಿದ್ದ ಬಿಜೆಪಿಗರು ಇಂದು ಮೌನಿಯಾಗಿರುವುದು ಏಕೆ?" ಎಂದು ಪ್ರಶ್ನಿಸಿದ್ದಾರೆ.
"ಸಮಾಜವನ್ನ ನಿರ್ಲಕ್ಷಿಸಿದಾಗ ಅಧಃಪತನ ಆರಂಭ ಎಂಬ ಸ್ವಾಮಿ ವಿವೇಕಾನಂದರ ಮಾತನ್ನ ಈ ಸಂದರ್ಭದಲ್ಲಿ ನೆನಪಿಸಲು ಬಯಸುವೆ" ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಆಗ್ರಹಿಸಿ ಕಳೆದ ಒಂದೂವರೆ ತಿಂಗಳಿಗೂ ಅಧಿಕ ಕಾಲದಿಂದ ದೆಹಲಿಯ ಹಲವು ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಮಂಗಳವಾರ ರೈತರ ಗುಂಪು ಕೆಂಪುಕೋಟೆಯ ಆವರಣಕ್ಕೆ ಲಗ್ಗೆ ಇಟ್ಟಿದ್ದು, ರೈತನೋರ್ವ ಕೆಂಪುಕೋಟೆಯ ಮುಂಭಾಗದಲ್ಲಿರುವ ಧ್ವಜಸ್ತಂಭಕ್ಕೆ ಹತ್ತಿ ಅಲ್ಲಿ ಭಾರತೀಯ ಕಿಸಾನ್ ಯೂನಿಯನ್ನ ಧ್ವಜವನ್ನು ಹಾರಿಸಿದ್ದನು.
ರೈತರ ಟ್ಯ್ರಾಕ್ಟರ್ ರ್ಯಾಲಿ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ಈ ಸಂದರ್ಭ ಪೊಲೀಸರು ಹಾಗೂ ರೈತರ ನಡುವೆ ಸಂಘರ್ಷ ನಡೆದು ಪರಿಸ್ಥಿತಿ ಉದ್ವಿಗ್ನ ಸ್ಥಿತಿಗೆ ತಲುಪಿದೆ. ಈ ನಡುವೆ ಓರ್ವ ಪ್ರತಿಭಟನಾನಿರತ ರೈತ ಸಾವನ್ನಪ್ಪಿದ್ದು, ಹಲವು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದರು.