ಕೊಲ್ಕತ್ತಾ, ಜ.27 (DaijiworldNews/MB) : ಬಿಜೆಪಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಅವರು ಪಶ್ಚಿಮ ಬಂಗಾಳದ ಬೀರಭೂಮ್ ಜಿಲ್ಲೆಯ ಬಿಜೆಪಿ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜವನ್ನು ತಲೆ ಕೆಳಗಾಗಿ ಹಾರಿಸಿರುವ ಘಟನೆ ನಡೆದಿದ್ದು ಆಡಳಿತಾರೂಢ ಟಿಎಂಸಿ ಬಿಜೆಪಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದೆ.
ಪಕ್ಷದ ಕಚೇರಿಯಲ್ಲಿ ಘೋಷ್ ರಾಷ್ಟ್ರಧ್ವಜವನ್ನು ಹಾರಿಸುವಾಗ ಹಸಿರು ಬಣ್ಣ ಮೇಲ್ಭಾಗದಲ್ಲಿದ್ದರೆ ಕೇಸರಿ ಕೆಳಗೆ ಇರುವುದು ಗಮನಕ್ಕೆ ಬಂದಿದ್ದು ಕೂಡಲೇ ಧ್ವಜ ಕೆಳಗಿಳಿಸಿ ಸರಿಯಾದ ಕ್ರಮದಲ್ಲಿ ಹಾಕಿ ಧ್ವಜಾರೋಹಣ ಮಾಡಲಾಗಿತ್ತು.
ಈ ಹಿನ್ನೆಲೆ ಬಿಜೆಪಿಯ ವಿರುದ್ದ ಕಿಡಿಕಾರಿರುವ ಟಿಎಂಸಿ, "ರಾಷ್ಟ್ರಧ್ವಜವನ್ನು ಸರಿಯಾಗಿ ಹಾರಿಸಲು ಬಾರದವರು ದೇಶ ಅಥವಾ ರಾಜ್ಯವನ್ನು ಮುನ್ನಡೆಸಲು ಅರ್ಹರಲ್ಲ" ಎಂದು ಟೀಕೆ ಮಾಡಿದೆ.
ಆದರೆ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಘೋಷ್, "ಈ ಅಜಾಗರೂಕತೆಯಿಂದ ಆದ ಪ್ರಮಾದದಿಂದ ಮುಜುಗರವುಂಟಾಗಿದೆ. ಆದರೆ ರಾಷ್ಟ್ರಧ್ವಜವನ್ನು ಅವಮಾನಿಸುವ ಉದ್ದೇಶ ಯಾರಿಗೂ ಇರಲಿಲ್ಲ. ಮುಂದೆ ಈ ರೀತಿಯ ತಪ್ಪು ನಡೆಯದಂಯೆ ನೋಡಿಕೊಳ್ಳಲು ಸದಸ್ಯರಿಗೆ ತಿಳಿಸಲಾಗಿದೆ" ಎಂದು ಹೇಳಿದ್ದಾರೆ.