ನವದೆಹಲಿ, ಜ.27 (DaijiworldNews/PY): ರೈತರ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡ ಕಾರಣ ದೆಹಲಿಯ ಕೆಂಪುಕೋಟೆ ಸುತ್ತಲೂ ಭಾರೀ ಭದ್ರತೆ ನೀಡಲಾಗಿದೆ.
ಮಂಗಳವಾರ ರೈತರ ಗುಂಪು ಕೆಂಪುಕೋಟೆಯ ಆವರಣಕ್ಕೆ ಲಗ್ಗೆ ಇಟ್ಟಿದ್ದು, ರೈತನೋರ್ವ ಕೆಂಪುಕೋಟೆಯ ಮುಂಭಾಗದಲ್ಲಿರುವ ಧ್ವಜಸ್ತಂಭಕ್ಕೆ ಹತ್ತಿ ಅಲ್ಲಿ ಭಾರತೀಯ ಕಿಸಾನ್ ಯೂನಿಯನ್ನ ಧ್ವಜವನ್ನು ಹಾರಿಸಿದ್ದನು.
ರೈತರ ಟ್ಯ್ರಾಕ್ಟರ್ ರ್ಯಾಲಿ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ಈ ಸಂದರ್ಭ ಪೊಲೀಸರು ಹಾಗೂ ರೈತರ ನಡುವೆ ಸಂಘರ್ಷ ನಡೆದು ಪರಿಸ್ಥಿತಿ ಉದ್ವಿಗ್ನ ಸ್ಥಿತಿಗೆ ತಲುಪಿದೆ. ಈ ನಡುವೆ ಓರ್ವ ಪ್ರತಿಭಟನಾನಿರತ ರೈತ ಸಾವನ್ನಪ್ಪಿದ್ದು, ಹಲವು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಆಗ್ರಹಿಸಿ ಕಳೆದ ಒಂದೂವರೆ ತಿಂಗಳಿಗೂ ಅಧಿಕ ಕಾಲದಿಂದ ದೆಹಲಿಯ ಹಲವು ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
"ರೈತರ ಪ್ರತಿಭಟನೆಯ ಧ್ವನಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಭಾರೀ ಭದ್ರತೆ ಕಲ್ಪಿಸಲಾಗಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.