ಚಂಡೀಘಡ, ಜ.27 (DaijiworldNews/MB) : ''ಶಾಂತಿಯುತ ಹೋರಾಟದಲ್ಲಿ ಸಮಾಜ ಘಾತುಕ ಶಕ್ತಿಗಳು ನುಸುಳಿವೆ'' ಎಂದು ಪ್ರತಿಭಟನಾನಿರತ ರೈತ ಮುಖಂಡರು ಆರೋಪಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ 40 ರೈತ ಒಕ್ಕೂಟಗಳನೊಳಗೊಂಡ ಸಂಯುಕ್ತ ಕಿಸಾನ್ ಮೋರ್ಚಾದ ಹಿರಿಯ ರೈತ ಮುಖಂಡರು, ''ಪಂಜಾಬಿನ 32 ರೈತ ಒಕ್ಕೂಟಗಳ ಭಾಗ ಕೆಎಂಎಸ್ಸಿ ಅಲ್ಲ, ಆದರೆ ರೈತರ ಸಭೆಗಳಲ್ಲಿ ಅದು ಭಾಗಿಯಾಗಿತ್ತು. ಆ ಸಂಘಟನೆಯು ದೆಹಲಿಗೆ ತೆರಳದಂತೆ ಸಂಯುಕ್ತ ಕಿಸಾನ್ ಮೋರ್ಚಾ ನಾಯಕರು ಹೇಳುತ್ತಿದ್ದನ್ನು ಕೇಳುತ್ತಿರಲಿಲ್ಲ'' ಎಂದು ಮುಖಂಡರೋರ್ವರು ದೂರಿದ್ದಾರೆ.
ಇನ್ನು, ''ದೆಹಲಿ ಪೊಲೀಸರು ಮತ್ತಿತರ ಶಕ್ತಿಗಳು ಕೂಡಾ ರೈತರನ್ನು ಹಾದಿ ತಪ್ಪಿಸಿದ್ದಾರೆ'' ಎಂದು ಕೂಡಾ ಮುಖಂಡರು ಆರೋಪಿಸಿದ್ದಾರೆ.
''ಹಿಂಸಾಚಾರಕ್ಕೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕಾರಣ. ಪರೇಡ್ನಲ್ಲಿ ಅಭೂತಪೂರ್ವವಾಗಿ ಪಾಲ್ಗೊಂಡ ರೈತರನ್ನು ನಾವು ಅಭಿನಂದಿಸುತ್ತೇವೆ. ಅನರ್ಹ ಹಾಗೂ ಸ್ವೀಕರಿಸಲಾಗದ ಘಟನೆಗಳನ್ನು ಖಂಡಿಸುತ್ತೇವೆ'' ಎಂದು ಮೋರ್ಚಾ ಹೇಳಿದೆ.
''ಕೆಲ ಸಂಘಟನೆಗಳು ಹಾಗೂ ಕೆಲ ವ್ಯಕ್ತಿಗಳು ಮಾರ್ಗ ಉಲ್ಲಂಘಿಸಿ, ಈ ಖಂಡನಾರ್ಹ ಕೃತ್ಯವೆಸಗಿದ್ದಾರೆ. ಪರೇಡ್ ವೇಳೆ ನಡೆದ ಘಟನೆ ಬಗ್ಗೆ ಸ್ಪಷ್ಟ ಚಿತ್ರಣ ಪಡೆದು ಬಳಿಕ ಹೇಳಿಕೆ ಬಿಡುಗಡೆ ಮಾಡಲಾಗುತ್ತದೆ'' ಎಂದು ಮುಖಂಡರೊಬ್ಬರು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಖಿಲ ಭಾರತ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲಾ, ''ಹಿಂಸಾಚಾರಕ್ಕೆ ಕೆಲ ಸಮಾಜ ವಿರೋಧಿ ಶಕ್ತಿಗಳು ಕಾರಣ. ಅವರು ಕೆಲವೆಡೆ ರೈತರೊಂದಿಗೆ ಸಂಘರ್ಷ ನಡೆಸಿದ್ದು, ಶಾಂತಿಯುತ ಪ್ರತಿಭಟನೆಗೆ ಧಕ್ಕೆ ಉಂಟು ಮಾಡಿದ್ದಾರೆ'' ಎಂದು ಹೇಳಿದ್ದಾರೆ.