ಕೊಪ್ಪಳ, ಜ.27 (DaijiworldNews/MB) : ''ಗಣರಾಜ್ಯೋತ್ಸವದಂದು ರಾಷ್ಟ್ರ ರಾಜಧಾನಿಯಲ್ಲಿ ಕೆಂಪು ಕೋಟೆಗೆ ನುಗ್ಗಿದವರು ರೈತರಲ್ಲ, ಭಯೋತ್ಪಾದಕರು'' ಎಂದು ಕರ್ನಾಟಕ ಕೃಷಿ ಸಚಿವ ಬಿ.ಸಿ. ಪಾಟೀಲ್ ಮಂಗಳವಾರ ಹೇಳಿದ್ದಾರೆ.
ಇಲ್ಲಿನ ಕೊಪ್ಪಳ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ನಡೆದ 72 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ತ್ರಿವರ್ಣ ಧ್ವಜ ಅವರೋಹಣ ಮಾಡಿದ ಬಳಿಕ ಮಾತನಾಡಿದ ಅವರು, ''ಕೆಂಪು ಕೋಟೆಗೆ ನುಗ್ಗಿದವರನ್ನು ಯಾವುದೇ ಕಾರಣಕ್ಕೂ ರೈತರು ಎಂದು ಕರೆಯಲಾಗುವುದಿಲ್ಲ. ಅವರನ್ನು ಕಾಂಗ್ರೆಸ್ ಮತ್ತು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಎಂದು ಮಾತ್ರ ಕರೆಯಬಹುದು'' ಎಂದು ಹೇಳದರು.
ಇನ್ನು ಪಾಟೀಲ್ ಅವರು ಹಲವು ಭಾರೀ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. 2020 ರ ಡಿಸೆಂಬರ್ನಲ್ಲಿ, ಕಾರ್ಯಕ್ರಮವೊಂದರಲ್ಲಿ, ''ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು'' ಎಂದು ಹೇಳುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು.
ಕಳೆದ ವಾರ ಮತ್ತೊಂದು ಕಾರ್ಯಕ್ರಮದಲ್ಲಿ ತಮ್ಮ ಅದೇ ಹೇಳಿಕೆಯನ್ನು ಪುನರುಚ್ಚರಿಸಿದರು. ದುರ್ಬಲ ಮನಸ್ಸಿನ ರೈತರು ತಮ್ಮ ಜೀವನವನ್ನು ಕೊನೆಗೊಳಿಸುತ್ತಾರೆ ಎಂದಿದ್ದರು. ಎರಡೂ ಸಂದರ್ಭಗಳಲ್ಲಿ, ರೈತ ಮುಖಂಡರು ಪಾಟೀಲ್ ಅವರು ಕ್ಷಮೆಯಾಚಿಸುವಂತೆ ಹೇಳಿದ್ದರು.
''ಭಾರತೀಯ ತ್ರಿವರ್ಣ ಮತ್ತು ಕೆಂಪು ಕೋಟೆ ವಿಶೇಷ, ಸಾಂವಿಧಾನಿಕ ಪಾವಿತ್ರ್ಯತೆಯನ್ನು ಹೊಂದಿದೆ. ವಿಶೇಷವಾಗಿ ಗಣರಾಜ್ಯೋತ್ಸವದಂದು ದೇಶದ ಪ್ರಜಾಪ್ರಭುತ್ವ ಇತಿಹಾಸದಲ್ಲೇ ಮೊದಲ ಬಾರಿಗೆ ಅವಮಾನಿಸಲಾಗಿದೆ. ಇದು ಅತ್ಯಂತ ಖಂಡನೀಯ ಮತ್ತು ತಪ್ಪಿತಸ್ಥರನ್ನು ಮುನ್ನೆಲೆಗೆ ತರಬೇಕು" ಎಂದು ಹೇಳಿದರು.
ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಪ್ರಸ್ತುತ ರಾಜಕಾರಣೀಯಾಗಿರುವ ಪಾಟೀಲ್, ''ಭಾರತದ ರೈತರ ಸಂಸ್ಕೃತಿಯು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಅಥವಾ ಪೊಲೀಸರ ಮೇಲೆ ಹಲ್ಲೆ ಮಾಡುವುದಲ್ಲ'' ಎಂದರು.
''ರೈತರ ವೇಷದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರು ಕಾಂಗ್ರೆಸ್ ಸಹಾಯದಿಂದ ದೇಶಕ್ಕೆ ನುಸುಳಿರುವುದರಿಂದ ದೇಶದ ಸೈನ್ಯವೂ ಅಪಾಯದಲ್ಲಿದೆ'' ಎಂದು ಕೂಡಾ ಹೇಳಿದರು.
"ಈಗ ನಮ್ಮ ಸೈನ್ಯ ಕೂಡ ಅಪಾಯದಲ್ಲಿದೆ. ಕಾಂಗ್ರೆಸ್ ಮತ್ತು ಸಮಾಜ ವಿರೋಧಿಗಳು ಇಂತಹ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದ್ದಾರೆ. ಅವರು ಮುಂದೆ ಎಂತಹ ದಾಳಿ ಬೇಕಾದರೂ ಮಾಡಬಹುದು'' ಎಂದರು.
ಇದೇ ಸಂದರ್ಭ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪಾಟೀಲ್, ''ಪ್ರಧಾನಿ ನರೇಂದ್ರ ಮೋದಿಯವರ ಉತ್ತಮ ಆಡಳಿತವನ್ನು ಉರುಳಿಸಲಾಗದೆ ಕಾಂಗ್ರೆಸ್ ಹತಾಶವಾಗಿದೆ. ಇದರ ಪರಿಣಾಮವಾಗಿ, ಪಕ್ಷವು ಪ್ರತಿಭಟನಾಕಾರರನ್ನು ಬೆಂಬಲಿಸುತ್ತಿದೆ. ರೈತರ ನಡುವೆ ಕೋಲಾಹಲ ಸೃಷ್ಟಿಸಿ ಭಯೋತ್ಪಾದಕರನ್ನು ಪ್ರಚೋದಿಸುತ್ತಿದೆ'' ಎಂದು ದೂರಿದರು.