ನವದೆಹಲಿ, ಜ.27 (DaijiworldNews/MB) : ಗಣರಾಜ್ಯೋತ್ಸವ ದಿನದಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದ ರೈತರ ಟ್ರ್ಯಾಕ್ಟರ್ ಪೆರೇಡ್ ಹಿಂಸಾಚಾರದ ಬಗ್ಗೆ ದೆಹಲಿ ಪೊಲೀಸರು ಮಂಗಳವಾರ, ಏಳು ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ 86 ಮಂದಿ ಗಾಯಗೊಂಡಿದ್ದಾರೆ. ಟ್ಯ್ರಾಕ್ಟರ್ ಮಗುಚಿ ಬಿದ್ದು ಒಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ ಪೊಲೀಸರು, ಪೂರ್ವ ಜಿಲ್ಲೆ ಮತ್ತು ದ್ವಾರಕಾದಲ್ಲಿ ತಲಾ ಮೂರು ಮತ್ತು ಶಹದಾರ ಜಿಲ್ಲೆಯಲ್ಲಿ ಒಂದು ಪ್ರಕರಣ ದಾಖಲಿಸಲಾಗಿದೆ. ಮತ್ತಷ್ಟು ಎಫ್ಐಆರ್ ದಾಖಲಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಮಂಗಳವಾರ ಟ್ರ್ಯಾಕ್ಟರ್ ಪೆರೇಡ್ ಸಂದರ್ಭ ಭಾರೀ ಹಿಂಸಾಚಾರ ನಡೆದಿದೆ. ರೈತರು ಬ್ಯಾರಿಕೇಡ್ಗಳನ್ನು ಮುರಿದಿದ್ದು, ಪೊಲೀಸರು ಹಾಗೂ ರೈತರ ನಡುವೆ ಭಾರೀ ಸಂಘರ್ಷ ಉಂಟಾಗಿತ್ತು. ರೈತರು ಕೆಂಪುಕೋಟೆ ಆವರಣದಲ್ಲಿ ತಮ್ಮ ಸಂಘದ ಧ್ವಜವನ್ನು ಹಾರಿಸಿದ್ದರು.
ದೆಹಲಿ ಪೊಲೀಸರ ಹಲವು ಸುತ್ತಿನ ಮಾತುಕತೆ ಬಳಿಕ ಟ್ರ್ಯಾಕ್ಟರ್ ಪೆರೇಡ್ಗೆ ಒಪ್ಪಿಗೆ ನೀಡಲಾಗಿತ್ತು. ಶಾಂತಿಯುತ ಪ್ರತಿಭಟನೆ ನಡೆಸಲು ಸಮಯ ಹಾಗೂ ಸ್ಥಳ ನಿಗದಿಯಾಗಿತ್ತು. ಆದರೆ ಮಂಗಳವಾರ ಬೆಳಗ್ಗೆ 8.30ರ ವೇಳೆಗೆ ಗಡಿಯಲ್ಲಿ ಒಗ್ಗೂಡಿದ 6,000ದಿಂದ 7,000 ಟ್ರ್ಯಾಕ್ಟರ್ಗಳು ಪೂರ್ವ ನಿರ್ಧಾರಿತ ಮಾರ್ಗದಲ್ಲಿ ಹೋಗುವ ಬದಲು ರಾಷ್ಟ್ರ ರಾಜಧಾನಿಯತ್ತ ಪ್ರಯಾಣ ಬೆಳೆಸಿದರು. ಎಷ್ಟು ಮನವಿ ಮಾಡಿದರೂ ರೈತರು ಬ್ಯಾರಿಕೇಡ್ಗಳನ್ನು ಮುರಿದರು. ಬಳಿಕ ರ್ಯಾಲಿ ಹಿಂಸಾಚಾರಕ್ಕೆ ತಿರುಗಿತು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಹಾಗೆಯೇ ಗಾಝಿಪುರ ಹಾಗ ಟಿಕ್ರಿ ಗಡಿ ಪ್ರದೇಶಗಳಲ್ಲೂ ಹಿಂಸಾಚಾರ ನಡೆದಿದೆ. ರೈತರು ಬ್ಯಾರಿಕೇಡ್ಗಳನ್ನು ಮುರಿದು ಪೊಲೀಸ್ ವಾಹನ ಹಾಗೂ ಸಿಬ್ಬಂದಿಗಳ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದರು. ಕೆಂಪುಕೋಟೆಗೆ ಬಂದು ತಮ್ಮ ಸಂಘದ ಧ್ವಜವನ್ನು ಹಾರಿಸಿದರು. ಕೊನೆಗೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸ್ ಯಶಸ್ವಿಯಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.