ಮಂಗಳೂರು, ಜ 26 (DaijiworldNews/SM):ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಪತ್ತೆಯಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಜನವರಿ 21ರಂದು ಏರ್ ಇಂಡಿಯಾ ಫ್ಲೈಟ್ ನಲ್ಲಿ ದುಬೈನಿಂದ ಆಗಮಿಸಿದ ಅಬ್ದುಲ್ ರಶೀದ್ ಅಡುಕ್ಕಮ್ ಕೊಟ್ಟುಂಬಾ ಎಂಬಾತನನ್ನು ಚಿನ್ನ ಸಹಿತ ವಶಕ್ಕೆ ಪಡೆದುಕೊಂಡಿದ್ದಾರೆ.
ಕೇರಳದ ಕಾಸರಗೋಡು ನಿವಾಸಿಯಾಗಿರುವ ರಶೀದ್ ಅವರು ಪೇಸ್ಟ್ ರೂಪದಲ್ಲಿ ಚಿನ್ನವನ್ನು ಗುದನಾಳದಲ್ಲಿರಿಸಿ ಕಳ್ಳಸಾಗಣೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 0.658 ಕೆಜಿ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಚಿನ್ನವು 24 ಕೆ ಶುದ್ಧತೆಯನ್ನು ಹೊಂದಿದ್ದು, ಇದರ ಮೌಲ್ಯ 33.29 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಕಸ್ಟಮ್ಸ್ ಕಮಿಷನರ್, ಇಮಾಮುದ್ದೀನ್ ಅಹ್ಮದ್, ಐಆರ್ಎಸ್, ಎಂಐಎ ಕಸ್ಟಮ್ಸ್ ತಂಡದ ನೇತೃತ್ವದಲ್ಲಿ ಉಪ ಕಮಿಷನರ್ ಅವಿನಾಶ್ ಕಿರಣ್ ರೊಂಗಾಲಿ ಮತ್ತು ಅಧಿಕಾರಿ ವಿಕಾಸ್, ಅಧೀಕ್ಷಕ ಶ್ರುತಿ ರಂಜನ್ ಬಾರಿಕ್ ಮತ್ತು ಅಧೀಕ್ಷಕ ಚಂದ್ರ ಮೋಹನ್ ಮೀನಾ ಅವರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಎಂಐಎ ಕಸ್ಟಮ್ಸ್ ನಡೆಸಿದ ಕಾರ್ಯಾಚರಣೆಯಲ್ಲಿ, ಜನವರಿ 26 ರಂದು ಸ್ಪೈಸ್ ಜೆಟ್ ವಿಮಾನ ಎಸ್ಜಿ 146 ಮೂಲಕ ದುಬೈನಿಂದ ಆಗಮಿಸಿದ್ದ ಇಬ್ಬರು ಪ್ರಯಾಣಿಕರಿಂದ 57 ಲಕ್ಷ ರೂ.ಗಳ 1.119 ಕೆಜಿ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು.