ಮಂಗಳೂರು, ಜ 26 (DaijiworldNews/SM): ಕೇಂದ್ರ ಸರಕಾರ ಇತ್ತೀಚಿಗೆ ಜಾರಿಗೆ ತರಲು ಹೊರಟಿರುವ ರೈತ ವಿರೋಧಿ ಕೃಷಿ ಮಸೂದೆಯ ವಿರುದ್ಧ ದೇಶದಾದ್ಯಂತ ರೈತರು ನಡೆಸುತ್ತಿರುವ ಪ್ರತಿಭಟನೆಗಳಿಗೆ ನೈತಿಕ ಬೆಂಬಲವಾಗಿ ಗಣರಾಜ್ಯೋತ್ಸವ ದಿನದಂದು ಮಂಗಳೂರಿನಲ್ಲೂ ಪ್ರತಿಭಟನೆ ನಡೆಸಲಾಯಿತು.
ದ.ಕ ಜಿಲ್ಲಾಧಿಕಾರಿ ಕಚೇರಿಯಿಂದ ಮಿನಿ ವಿಧಾನ ಸೌಧದ ವರೆಗೆ ಟ್ರಾಕ್ಟರ್ ರ್ಯಾಲಿ ನಡೆಸಲಾಯಿತು. ಸಮಾನ ಮನಸ್ಕ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ರೈತ ವಿರೋಧಿ ಕಾನೂನಗಳ ಬಗ್ಗೆ ಮಾತನಾಡಿದ ರೈತ ಮುಖಂಡ ರವಿಕಿರಣ್ ಪುಣಚ, ದೇಶದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು.
ಮೋದಿ ದೇಶ ಮಾರುವ ಬ್ರೋಕರ್ ಆಗಿದ್ದಾರೆ. ವಿಶ್ವ ಗುರು ಆಗುವ ಭ್ರಮೆಯಲ್ಲಿ ಇದ್ದಾರೆ. ಹೀಗೆ ಆದ್ರೆ ದೊಡ್ಡ ಜೋಕರ್ ಆಗ್ತಾರೆ. ದೇಶದ ರೈತರ ಬಗ್ಗೆ ಕಾಳಜಿ ಇಲ್ಲದ ಪ್ರಧಾನಿ ನರೇಂದ್ರ ಮೋದಿ ಎಂದು ರೈತ ಮುಖಂಡ ರವಿಕಿರಣ್ ಪುಣಚ ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆ ಕಚೇರಿ ಮುಂದೆ ಎಸ್ ಡಿಪಿಐ ವತಿಯಿಂದ ಪ್ರತಿಭಟನೆ:
ಇನ್ನು ಎಸ್ಡಿಪಿಐ ದ.ಕ. ಜಿಲ್ಲಾ ಸಮಿತಿ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆ ಕಛೇರಿ ಮುಂಭಾಗದಲ್ಲಿ ರೈತ ಐಕ್ಯತಾ ಸಂಗಮ ಎಂಬ ಹೆಸರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಈ ಪ್ರತಿಭಟನೆಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಎಸ್ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆಯವರು ಈ ದೇಶದಲ್ಲಿ ಫ್ಯಾಶಿಸ್ಟ್ ಮನೋಭಾವದ ಸರಕಾರವಿದ್ದು, ಇದು ಕೇವಲ ಅಲ್ಪಸಂಖ್ಯಾತರ, ದಲಿತ ಸಮುದಾಯಗಳಿಗೆ ಮಾತ್ರ ಮಾರಕವಲ್ಲ. ಇದು ದೇಶದ ಎಲ್ಲಾ ವರ್ಗಗಳ ಬದುಕನ್ನು ಕಸಿದುಕೊಳ್ಳುವ ಸಂವಿಧಾನ ವಿರೋಧಿ ಸರಕಾರವಾಗಿದ್ದು, ಇದರ ಅಪಾಯದ ವಿರುದ್ಧ ಎಸ್ಡಿಪಿಐ ಕಲೆದ 10 ವರ್ಷಗಳಿಂದ ಜನತೆಯನ್ನು ಎಚ್ಚರಿಸುತ್ತಲೇ ಬರುತ್ತಿದ್ದು, ಇದೀಗ ಮೋದಿ ನೇತ್ರತ್ವದ ಬಿಜೆಪಿ ಸರಕಾರ ಜನ ವಿರೋಧಿ ನಿಲುವುಗಳು ನಮ್ಮ ಮುಂದೆ ಒಂದೊಂದಾಗಿ ಅನಾವರಣ ಗೊಳ್ಳುತ್ತಿದ್ದು ಇದರ ವಿರುದ್ಧ ನಾವು ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಹೋರಾಟ ಮಾಡಬೇಕೆಂದು ಹೇಳಿದರು.