ಮಂಗಳೂರು, ಜ 26 (DaijiworldNews/SM): ಕೊರೋನಾದ ಬಳಿಕ ಕರಾವಳಿ ಭಾಗದ ಜಾನಪದ ಕ್ರೀಡೆಯಾಗಿರುವ ಕಂಬಳ ಆಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಜನವರಿ ಅಂತ್ಯದಿಂದ ಕಂಬಳ ಕ್ರೀಡೆ ಆಯೋಜಿಸ ಬಹುದೆಂದು ದ.ಕ. ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಸ್ತುತ ಸಾಲಿನ ಕಂಬಳ ಕ್ರೀಡೆಯನ್ನು ಆಯೋಜಿಸುವ ಕುರಿತ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಂಬಳ ಕರಾವಳಿ ಕರ್ನಾಟಕ ಭಾಗದ ಒಂದು ಜಾನಪದ ಕ್ರೀಡೆಯಾಗಿದ್ದು ಕರಾವಳಿ ಭಾಗದ ರೈತಾಪಿ ಜನರು ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಭತ್ತದ ಕೊಯ್ಲಿನ ನಂತರ ಆರಂಭಿಸುತ್ತಾರೆ. ಫೆಬ್ರವರಿ-ಮಾರ್ಚ್ ವರೆಗೆ ತಮ್ಮ ಮನೋರಂಜನೆಗಾಗಿ ಸಾಂಘಿಕ ಬಲದೂಂದಿಗೆ ಕಂಬಳವನ್ನು ನಡೆಸುತ್ತಾರೆ ಎಂದರು.
ಕಂಬಳಕ್ಕೆ ನೂರಾರು ವರ್ಷದ ಇತಿಹಾಸವಿದ್ದು ರಾಜಮಹಾರಾಜರುಗಳು ಪ್ರೋತ್ಸಾಹ ನೀಡಿದ್ದಾರೆ. ಈ ಬಾರಿ ಕೋವಿಡ್ ಸೋಂಕಿನಿಂದಾಗಿ ರೈತರು ಜನವರಿ ಅಂತ್ಯವಾದರೂ ಪ್ರಾರಂಭಿಸಿಲ್ಲ. ಆಯೋಜಕರು ಕೋವಿಡ್ ಮಾರ್ಗಸೂಚಿಗಳನ್ನು ಚಾಚೂತಪ್ಪದೆ ಪಾಲಿಸುವುದರೊಂದಿಗೆ ಜನವರಿ ಮೂವತ್ತರಿಂದ ಜಿಲ್ಲೆಯಲ್ಲಿ 10 ಕಂಬಳ ಕಾರ್ಯಕ್ರಮವನ್ನು ಏರ್ಪಡಿಸಬಹುದಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ ಕೋವಿಡ್ ಸಂದರ್ಭವಾದ ಈ ದಿನಗಳಲ್ಲಿ ಅತಿ ಹೆಚ್ಚು ಮುಂಜಾಗೃತಾ ಕ್ರಮಗಳನ್ನು ವಹಿಸಬೇಕು. ಹೆಚ್ಚು ಜನರು ಸೇರಿದಂತೆ ಕ್ರಮವಹಿಸಬೇಕು. ರಾತ್ರಿ ಹತ್ತು ಗಂಟೆಯ ಒಳಗಾಗಿ ಕಂಬಳ ಕಾರ್ಯಕ್ರಮವನ್ನು ಪೂರ್ಣಗೊಳಿಸಬೇಕು ಎಂದರು.