ಕುಂದಾಪುರ, ಜ 26 (DaijiworldNews/SM): ಯಾವುದೇ ಇಲಾಖೆಯಲ್ಲಿ ಬ್ರೋಕರ್ ಗಳ ಹಾವಳಿ ಇದ್ದರೆ ಅದನ್ನು ತಡೆಗಟ್ಟುವ ಕಾರ್ಯ ಮಾಡಲಾಗುವುದು ಎಂದು ಮೀನುಗಾರಿಕಾ ಮತ್ತು ಬಂದರು ಸಚಿವ ಎಸ್. ಅಂಗಾರ ಅವರು ಹೇಳಿದ್ದಾರೆ.
ಕುಂದಾಪುರದ ಆನೆಗುಡ್ಡೆ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ನಾನೂ ಕೂಲಿ ಕಾರ್ಮಿಕ. ಕೂಲಿಯವರ ಕಷ್ಟ ಹಾಗೂ ಸುಖ ನನಗೆ ತಿಳಿದಿದೆ. ಹಾಗಾಗಿ ಈ ಬಗ್ಗೆ ತಿಳಿದುಕೊಂಡು ಮುಂದಿನ ಹೆಜ್ಜೆ ಇಡುತ್ತೇನೆ ಎಂದರು.
ಇನ್ನು ಕರಾವಳಿಯಾದ್ಯಂತ ಕಡಲ್ಕೊರೆತ ಸಮಸ್ಯೆಯನ್ನು ನಿವಾರಿಸಲು ಸಂಬಂಧಪಟ್ಟ ಇಂಜಿನಿಯರ್ ಗಳೊಂದಿಗೆ ಚರ್ಚಿಸಲಾಗುವುದು. ಯಾವ ರೀತಿಯ ತಾಂತ್ರಿಕತೆಯನ್ನು ಬಳಸಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತೇನೆ. ಬಳಿಕ ಮುಂದಿನ ಕಾರ್ಯ ಮಾಡುತ್ತೇವೆ ಎಂದು ಸಚಿವ ಎಸ್. ಅಂಗಾರ ಹೇಳಿದರು. ಮೀನುಗಾರರ ಸಾಲ ಮನ್ನಾದ ಬಗ್ಗೆಯೂ ಮುಖ್ಯಮಂತ್ರಿಯವರ ಗಮನಕ್ಕೆ ಮತ್ತೆ ತರಲಾಗುವುದು ಎಂದು ಇದೇ ವೇಳೆ ಅವರು ಹೇಳಿದರು.
ಇನ್ನು ಸಚಿವ ಎಸ್. ಅಂಗಾರ ಅವರು ಕುಂದಾಪುರದ ಆನೆಗುಡ್ಡೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ನಾನು ಒಂದೇ ಸರ್ಕಾರದವರು. ಅವರೂ ಸಚಿವರು ಈಗ ನಾನೂ ಸಚಿವ. ಅವರ ಉದ್ದೇಶ, ಯೋಜನೆಯಲ್ಲಿ ಯಾವುದೇ ಗೊಂದಲಗಳಿಲ್ಲ. ಹೆಚ್ಚುವರಿಯಾಗಿ ನಾವೇನು ಅಭಿವೃದ್ಧಿ ಮಾಡಬೇಕು ಅದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತೇವೆ ಎಂದರು.