ಕಾರವಾರ,ಜ.26 (DaijiworldNews/HR): "ಬಿಜೆಪಿಯಲ್ಲಿ ಯಾವುದೇ ಗುಂಪುಗಳಿಲ್ಲ ಯಾವ ಖಾತೆ ಲಭಿಸಿದೆ ಎಂಬುದಕ್ಕಿಂತಲೂ ಕೊಟ್ಟ ಖಾತೆಯನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು ಬಹಳ ಮುಖ್ಯ" ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಚಿವ ಸಂಪುಟ ಪುನರ್ರಚನೆ ಮಾಡಿದಾಗಲೆಲ್ಲ ಸಚಿವರ ಅಸಮಾಧಾನಗಳ ಕುರಿತಾದ ಚರ್ಚೆಗಳು ನಡೆಯುತ್ತವೆ. ಇದು ಕೇವಲ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಅಂತಲ್ಲ. ಈ ಹಿಂದೆಯೂ ಅನೇಕ ಸರ್ಕಾರಗಳಲ್ಲಿ ಆಗಿದೆ" ಎಂದರು.
ಇನ್ನು ಕಾಂಗ್ರೆಸ್ನಿಂದ ಬಿಜೆಪಿಗೆ ಸೇರ್ಪಡೆಗೊಂಡ ಎಲ್ಲರು ಕೂಡ ಒಟ್ಟಿಗೇ ಇದ್ದೇವೆ. ಈಗ ನಮ್ಮ ಪಕ್ಷದಲ್ಲಿ ಯಾವುದೇ ಗುಂಪುಗಳಿಲ್ಲ. ಆನಂದ ಸಿಂಗ್ ಸೇರಿದಂತೆ ಸಂಪುಟದ ಎಲ್ಲರ ಜೊತೆಗೇ ನೂರಕ್ಕೆ ನೂರು ಒಗ್ಗಟ್ಟಾಗಿದ್ದೇವೆ. ಆಡಳಿತದ ದೃಷ್ಟಿಯಿಂದ ಪದೇಪದೇ ಖಾತೆ ಬದಲಾವಣೆ ಸರಿಯಲ್ಲ ಎಂಬುದು ಎಲ್ಲರ ಅಭಿಪ್ರಾಯವಾಗಿದೆ" ಎಂದು ಹೇಳಿದ್ದಾರೆ.