ನವದೆಹಲಿ, ಜ.26 (DaijiworldNews/MB) : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಆಗ್ರಹಿಸಿ ಕಳೆದ ಒಂದೂವರೆ ತಿಂಗಳಿಗೂ ಅಧಿಕ ಕಾಲದಿಂದ ದೆಹಲಿಯ ಹಲವು ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಲಿರುವ ರೈತರು ಗಣರಾಜ್ಯೋತ್ಸವವಾದ ಈ ದಿನದಂದು ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಂಡಿದ್ದಾರೆ. ಈ ಸಂದರ್ಭ ಪೊಲೀಸರು ಹಾಗೂ ರೈತರ ನಡುವೆ ಸಂಘರ್ಷ ನಡೆದು ಪರಿಸ್ಥಿತಿ ಉದ್ವಿಗ್ನ ಸ್ಥಿತಿಗೆ ತಲುಪಿದೆ. ರ್ಯಾಲಿ ಹಿಂಸಾಚಾರಕ್ಕೆ ತಿರುಗಿದೆ. ಏತನ್ಮಧ್ಯೆ ಸಿಂಘು, ಟಿಕ್ರಿ ಹಾಗೂ ಘಾಜಿಪುರ ಗಡಿ ಭಾಗಗಳು ಸೇರಿದಂತೆ ಕೆಲ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಅಂತರ್ಜಾಲ ಸಂಪರ್ಕ ಕಡಿತಗೊಳಿಸಲಾಗಿದೆ.
ಪೊಲೀಸರು ಹಾಗೂ ರೈತರ ನಡುವೆ ಸಂಘರ್ಷ ನಡೆಯುತ್ತಲ್ಲಿದ್ದು, ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದು ಲಾಠಿ ಚಾರ್ಜ್ ಮಾಡಿದರೆ, ರೈತರು ಟ್ರ್ಯಾಕ್ಟರ್ಗಳಲ್ಲಿ ಮುನ್ನುಗ್ಗುತ್ತಿದ್ದಾರೆ.
ಏತನ್ಮಧ್ಯೆ ಓರ್ವ ರೈತ ಸಾವನ್ನಪ್ಪಿದ್ದಾನೆ. ಪೊಲೀಸರ ಗುಂಡೇಟಿನಿಂದ ಟ್ರ್ಯಾಕ್ಟರ್ ರ್ಯಾಲಿ ವೇಳೆ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ರೈತನಿಗೆ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಮಗುಚಿ ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ರೈತರು ಆರೋಪಿಸಿದ್ದಾರೆ. ಆದರೆ ಪೊಲೀಸರು ಟ್ರಾಕ್ಟರ್ ಮಗುಚಿದ ಕಾರಣ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದಿರುವ ಬಗ್ಗೆ ವರದಿಯಾಗಿದೆ.
ಇನ್ನು ರೈತರ ಗುಂಪು ಕೆಂಪುಕೋಟೆಯ ಆವರಣಕ್ಕೆ ಲಗ್ಗೆ ಇಟ್ಟಿದ್ದು ರೈತನೋರ್ವ ಕೆಂಪುಕೋಟೆಯ ಮುಂಭಾಗದಲ್ಲಿರುವ ಧ್ವಜಸ್ತಂಭಕ್ಕೆ ಹತ್ತಿ ಅಲ್ಲಿ ಭಾರತೀಯ ಕಿಸಾನ್ ಯೂನಿಯನ್ ನ ಧ್ವಜವನ್ನು ಹಾರಿಸಿದ್ದಾನೆ. ಈ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.