ಪಟಿಯಾಲ, ಜ.26 (DaijiworldNews/PY): ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, "ಕೃಷಿ ತಿದ್ದುಪಡಿ ಕಾಯ್ದೆ ಸೂಕ್ತವಾದುದಲ್ಲ" ಎಂದಿದ್ದಾರೆ.
ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿ ಬಳಿಕ ಮಾತನಾಡಿದ ಅವರು, "ಹಿರಿಯ ರೈತರು ಗಡಿ ಭಾಗದಲ್ಲಿ ಕುಳಿತು ಧರಣಿ ನಡೆಸುತ್ತಿದ್ದಾರೆ. ಈ ಧರಣಿ ಅವರಿಗಾಗಿ ಅಲ್ಲ. ಬದಲಾಗಿ ಅವರ, ಮಕ್ಕಳು ಹಾಗೂ ಅವರ ಭವಿಷ್ಯದ ಪೀಳಿಗೆಗಾಗಿ. ಸಂವಿಧಾನದ ಏಳನೇ ಪರಿಚ್ಛೇದದ ಪ್ರಕಾರ ಕೃಷಿ ಎಂದಿಗೂ ಕೂಡಾ ರಾಜ್ಯದ ವಿಚಾರ. ಆದರೆ, ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ಸೂಕ್ತವಾದುದಲ್ಲ" ಎಂದು ತಿಳಿಸಿದ್ದಾರೆ.
"ರೈತರ ಬೇಡಿಕೆ ಈಡೇರಿಸಬೇಕು ಎನ್ನುವುದು ನನ್ನ ಮನವಿ. ಶಾಂತಿ ಕಾಪಾಡಿಕೊಳ್ಳಿ ದೇಶ ಎಂದಿಗೂ ನಿಮ್ಮ ಜೊತೆ ಇದೆ" ಎಂದಿದ್ದಾರೆ.