ಬಾಗಲಕೋಟೆ,ಜ.26 (DaijiworldNews/HR): "ಕೈ ಮುಗಿದು ಪ್ರಾರ್ಥನೆ ಮಾಡುತ್ತೇವೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಯನ್ನು ಅನುಷ್ಠಾಗೊಳಿಸಲು ಅವಕಾಶ ಮಾಡಿಕೊಡಿ" ಎಂದು ರೈತ ಸಮುದಾಯಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೃಷಿ ಮಸೂದೆಯಿಂದ ರೈತರಿಗೆ ತೊಂದರೆಯಾದಲ್ಲಿ ಮುಂದೆ ತಿದ್ದುಪಡಿ ಮಾಡಬಹುದು, ಸಾರ್ವಜನಿಕ ಹಿತಕ್ಕಾಗಿ ಹಲವು ಬಾರಿ ದೇಶದ ಸಂವಿಧಾನವನ್ನೇ ತಿದ್ದುಪಡಿ ಮಾಡಿದ್ದೇವೆ ಹಾಗಾಗಿ ಕೃಷಿ ಕಾಯ್ದೆ ತಿದ್ದುಪಡಿಗೂ ಅವಕಾಶ ಇದೆ" ಎಂದರು.
ಇನ್ನು "ಕೃಷಿ ಕಾಯ್ದೆ ರೈತರ ವಿರೋಧಿಯಾಗಿದೆ ಎಂಬುದು ಸುಳ್ಳು ಸುದ್ದಿ. ರಾಜ್ಯದಲ್ಲೆ 100 ರೈತರ ಪೈಕಿ 95 ಮಂದಿ ಕಾಯ್ದೆಯನ್ನು ಸ್ವಾಗತಿಸಿದ್ದು, ಒಂದೆರಡು ರಾಜ್ಯಗಳಲ್ಲಿ ಮಾತ್ರ ಅದಕ್ಕೆ ವಿರೋಧ ಎದುರಾಗಿದೆ. ರೈತರನ್ನು ದಲ್ಲಾಳಿಗಳ ಶೋಷಣೆಯಿಂದ ತಪ್ಪಿಸಿ ಮಾರುಕಟ್ಟೆಯಲ್ಲಿ ಮುಕ್ತ ಅವಕಾಶ ಕಲ್ಪಿಸಬೇಕು ಎಂಬುದು ಕಾಯ್ದೆಯ ಆಶಯವಾಗಿದೆ" ಎಂದು ಹೇಳಿದ್ದಾರೆ.