ತುಮಕೂರು, ಜ.26 (DaijiworldNews/PY): ಖಾತೆ ಬದಲಾವಣೆ ವಿಚಾರದಿಂದ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ರಾಜೀನಾಮೆ ನೀಡುವ ತೀರ್ಮಾನದಿಂದ ಹಿಂದಕ್ಕೆ ಸರಿದಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪದೇ ಪದೇ ಖಾತೆ ಬದಲಾವಣೆ ಮಾಡುತ್ತಿರುವುದನ್ನು ನೋಡಿ ಬೇಸರವಾಗಿತ್ತು. ನನ್ನ ಒಳ್ಳೆಯತನ ಹಾಗೂ ನಿಷ್ಠೆಯನ್ನು ದುರುಪಯೋಗ ಮಾಡಿಕೊಳ್ಳಲಾಗಿತ್ತು. ಪದೇ ಪದೇ ಖಾತೆ ಬದಲಾವಣೆ ಮಾಡುವದರಿಂದ ಸಮಾಜಕ್ಕೆ ಯಾವ ಸಂದೇಶ ಕೊಡುತ್ತೀರಿ? ಎಂದು ಕೇಳಿದ್ದೆ. ಗಣರಾಜ್ಯೋತ್ಸವ ಧ್ವಜಾರೋಹಣದ ಬಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿರುವ ವಿಚಾರ ಸತ್ಯ" ಎಂದರು.
"ನನಗೆ ದೊಡ್ಡ ಖಾತೆಗಳನ್ನು ನೀಡಿ ಎಂದು ನಾನು ಕೇಳಿಲ್ಲ. ಆದರೆ, ಜನರ ಜೊತೆ ಇದ್ದುಕೊಂಡು ಕೆಲಸ ಮಾಡುವ ಖಾತೆ ನೀಡಿ ಎಂದು ಕೇಳಿದ್ದೆ. ಈ ಹಿಂದೆ ಸಣ್ಣ ನೀರಾವರಿ ಖಾತೆ ಯಾರಿಗೂ ಕೂಡಾ ಬೇಡವಾಗಿತ್ತು. ಯಾವುದಾದರೂ ಒಂದು ಪ್ರಮುಖ ಖಾತೆಯೊಂದಿಗೆ ಈ ಖಾತೆಯನ್ನು ಕೊಡುತ್ತಿದ್ದರು. ನಾನು ಸಚಿವನಾದ ಬಳಿಕ ಆ ಖಾತೆಯಲ್ಲಿ ಒಂದಷ್ಟು ಕೆಲಸ ಮಾಡಿದ್ದೇನೆ. ಕಾನೂನು ಹಾಗೂ ಸಂಸದೀಯ ವ್ಯವಹಾರ ಖಾತೆಯಿಂದಲೂ ತೆಗೆದುಹಾಕಿದ್ದಾರೆ. ನನಗೆ ಪುನಃ ಸಣ್ಣ ನೀರಾವರಿ ಖಾತೆ ನೀಡಿದ್ದಾರೆ. ಆದರೆ, ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿಲ್ಲ" ಎಂದು ತಿಳಿಸಿದರು.