ನವದೆಹಲಿ, ಜ.26 (DaijiworldNews/MB) : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಆಗ್ರಹಿಸಿ ಕಳೆದ ಒಂದೂವರೆ ತಿಂಗಳಿಗೂ ಅಧಿಕ ಕಾಲದಿಂದ ದೆಹಲಿಯ ಹಲವು ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಲಿರುವ ರೈತರು ಗಣರಾಜ್ಯೋತ್ಸವವಾದ ಈ ದಿನದಂದು ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಂಡಿದ್ದಾರೆ. ಈ ಸಂದರ್ಭ ಪೊಲೀಸರು ಹಾಗೂ ರೈತರ ನಡುವೆ ಸಂಘರ್ಷ ನಡೆದು ಪರಿಸ್ಥಿತಿ ಉದ್ವಿಗ್ನ ಸ್ಥಿತಿಗೆ ತಲುಪಿದೆ.
ಏತನ್ಮಧ್ಯೆ ರೈತರ ಗುಂಪು ಕೆಂಪುಕೋಟೆಯ ಆವರಣಕ್ಕೆ ಲಗ್ಗೆ ಇಟ್ಟಿದ್ದು ರೈತನೋರ್ವ ಕೆಂಪುಕೋಟೆಯ ಮುಂಭಾಗದಲ್ಲಿರುವ ಧ್ವಜಸ್ತಂಭಕ್ಕೆ ಹತ್ತಿ ಅಲ್ಲಿ ಭಾರತೀಯ ಕಿಸಾನ್ ಯೂನಿಯನ್ ನ ಧ್ವಜವನ್ನು ಹಾರಿಸಿದ್ದಾನೆ. ಈ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೆಂಪುಕೋಟೆಯ ಆವರಣಕ್ಕೆ ಪ್ರವೇಶಿಸಿರುವ ರೈತರು ಅದರ ಮುಂಭಾಗದಲ್ಲಿ ತಮ್ಮ ಟ್ರ್ಯಾಕ್ಟರ್ಗಳನ್ನು ಇರಿಸಿದ್ದಾರೆ. ರೈತರು ಮುತ್ತಿಗೆಯ ಯತ್ನವನ್ನು ಕೂಡಾ ಮಾಡಿದ್ದಾರೆ. ಪೊಲೀಸರು ರೈತರನ್ನು ನಿಯಂತ್ರಿಸಲು ಹರಸಾಹಸ ಮಾಡುತ್ತಿದ್ದು, ಪೊಲೀಸರು ರೈತರ ನಡುವೆ ಮಾತಿನ ಚಕಮಕಿಯೂ ನಡೆದಿದೆ.