ಧಾರವಾಡ, ಜ.26 (DaijiworldNews/PY): "ದೆಹಲಿಯಲ್ಲಿ ರೈತರ ಸಾವಿಗೆ ಕಾಂಗ್ರೆಸ್ ನೇರ ಹೊಣೆ" ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ಧಾರವಾಡದಲ್ಲಿ ಮಾತನಾಡಿದ ಅವರು, "ಪ್ರಧಾನಿ ಮೋದಿ ಅವರು ರೈತಪರ ಯೋಜನೆಯನ್ನು ತರುತ್ತಿದ್ದಾರೆ. ಹರಿಯಾಣ ಹಾಗೂ ಪಂಜಾಬ್ಗೆ ಮಾತ್ರವೇ ರೈತರ ಹೋರಾಟವು ಸೀಮಿತವಾಗಿದೆ" ಎಂದರು.
"ನಮ್ಮ ರಾಜ್ಯದಲ್ಲಿ ಯಾವ ರೈತರೂ ಕೂಡಾ ಕಾನೂನು ಬೇಡ ಎಂದು ಹೇಳಿಲ್ಲ. ರೈತರಿಗೆ ಹಿಂದಿನ ಸರ್ಕಾರ ನೀಡದಷ್ಟು ಸಹಾಯವನ್ನು ನಮ್ಮ ಸರ್ಕಾರ ನೀಡುತ್ತಿದೆ. ಸರ್ಕಾರ ರೈತರ ಹಿತಾಸಕ್ತಿಗೋಸ್ಕರ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರತಿಪಕ್ಷ ನೈತಿಕ ಬೆಂಬಲ ನೀಡಬೇಕಿತ್ತು. ಆದರೆ, ಟೀಕೆ ಮಾಡುತ್ತಿದೆ" ಎಂದು ತಿಳಿಸಿದರು.
"ಪ್ರಧಾನಿ ಮೋದಿ ಅವರು ಪಾರದರ್ಶಕವಾದ ಆಡಳಿತ ನಡೆಸುತ್ತಿದ್ದಾರೆ. ಕಾಂಗ್ರೆಸ್ಗೆ ವಿರೋಧ ವ್ಯಕ್ತಪಡಿಸಲು ಯಾವುದೇ ವಿಚಾರ ಇಲ್ಲದ ಕಾರಣ ಈ ಹೋರಾಟಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. 20-30 ವರ್ಷ ಆಡಳಿತ ನಡೆಸಿದವರು ರೈತರಿಗಾಗಿ ಯಾವುದೇ ನೆರವು ನೀಡಿಲ್ಲ" ಎಂದರು.
"ಕಾಂಗ್ರೆಸ್ ಪ್ರಚೋದನೆ ನೀಡಿ ಹೋರಾಟವನ್ನು ಹೆಚ್ಚಿಸುವ ಕಾರ್ಯವನ್ನು ಮಾಡುತ್ತಿದೆ. ನಿಜವಾಗಿ ನಿದ್ರೆ ಮಾಡುತ್ತಿರುವವರನ್ನು ಎಬ್ಬಿಸಬಹುದು. ಬದಲಾಗಿ ನಾಟಕ ಮಾಡುತ್ತಿರುವವರನ್ನು ಅಲ್ಲ" ಎಂದು ಟೀಕಿಸಿದರು.