ನವದೆಹಲಿ, ಜ.26 (DaijiworldNews/PY): "ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಸಂಸತ್ನಲ್ಲಿ ಅಂಗೀಕರಿಸಿದ್ದ ಮೂರು ಹೊಸ ಕೃಷಿ ಕಾನೂನುಗಳನ್ನು ಮಹಾರಾಷ್ಟ್ರದಲ್ಲಿ ಜಾರಿಗೆ ತರುವುದಿಲ್ಲ" ಎಂದು ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ನಾನಾ ಪಟೋಲೆ ಹೇಳಿದರು.
72ನೇ ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಗಣ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, "ಮಹಾರಾಷ್ಟ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳ ಬಗ್ಗೆ ಪರಿಶೀಲನೆ ನಡೆಸುವ ಸಲುವಾಗಿ ಸಮಿತಿಯನ್ನು ರಚನೆ ಮಾಡಲಿದೆ. ಈ ಮೂರು ಕೃಷಿ ಕಾಯ್ದೆಗಳನ್ನು ಮಹಾರಾಷ್ಟ್ರದಲ್ಲಿ ಜಾರಿಗೊಳಿಸುವುದಿಲ್ಲ" ಎಂದರು.
"ಮೊದಲಿಗೆ ನಾನು ರೈತ, ಬಳಿಕ ಸಾಂವಿಧಾನಿಕ ಹುದ್ದೆ ಅಲಂಕರಿಸಿರುವ ವ್ಯಕ್ತಿ. ಹಾಗಾಗಿ ನಾನು ರೈತರ ಹೋರಾಟಕ್ಕೆ ಬೆಂಬಲ ನೀಡುವ ಸಲುವಾಗಿ ಇಲ್ಲಿಗೆ ಬಂದಿದ್ದೇನೆ" ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಮಂಗಳವಾರ ನಡೆಯುತ್ತಿರುವ ಟ್ಯ್ರಾಕ್ಟರ್ ರ್ಯಾಲಿಗೆ ಬೆಂಬಲ ನೀಡಿ ಕಳೆದ ಎರಡು ದಿನಗಳಿಂದ ನಾಸಿಕ್ ಜಿಲ್ಲೆಯ ನೂರಾರು ಮಂದಿ ರೈತರು ಮುಂಬೈನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.