ಬೆಂಗಳೂರು, ಜ.26 (DaijiworldNews/PY): "ರೈತರ ಹೋರಾಟ ಅರ್ಥಹೀನವಾದುದು. ಸರ್ಕಾರವು ಶಾಂತಿಯುತವಾದ ಪ್ರತಿಭಟನೆಗೆ ಅವಕಾಶ ಕಲ್ಪಿಸಿದೆ. ರೈತರಿಗೆ ನಮ್ಮ ಮನೆ ಬಾಗಿಲು ಎಂದಿಗೂ ತೆರೆದಿರುತ್ತದೆ. ರೈತರು ಮಾತುಕತೆಗೆ ಬರಬಹುದು" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸರ್ಕಾರವು ರೈತರ ಹೋರಾಟವನ್ನು ತಡೆಯುವ ಕಾರ್ಯ ಮಾಡುತ್ತಿಲ್ಲ. ಟ್ಯ್ರಾಕ್ಟರ್ಗಳು ಬಂದರೆ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತದೆ. ಅಸ್ತಿತ್ವ ತೋರಿಸುವ ಕಾರಣ ಕೆಲ ಮಂದಿ ಈ ರೀತಿಯಾಗಿ ಮಾಡುತ್ತಿದ್ದಾರೆ" ಎಂದರು.
"ನೂತನ ಕೃಷಿ ಕಾಯ್ದೆ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಶ್ನೆಯೇ ಇಲ್ಲ. ಟ್ಯ್ರಾಕ್ಟರ್ ಬರುವುದನ್ನು ಮಾತ್ರ ತಡೆದಿದ್ದೇವೆ. ಪ್ರಧಾನಿ ಎಲ್ಲಾ ರೀತಿಯಲ್ಲಿ ಯೋಚಿಸಿ ಈ ಕಾಯ್ದೆಯನ್ನು ತಂದಿದ್ದು, ಆದರೂ ಕಾಯ್ದೆಯ ವಿರುದ್ದ ಹೋರಾಟ ನಡೆಸುವುದು ಸೂಕ್ತವಲ್ಲ" ಎಂದು ತಿಳಿಸಿದರು.
"ಏಕೆ ಹೋರಾಟ ಮಾಡುತ್ತಿದ್ದೇವೆ ಎನ್ನುವ ವಿಚಾರ ರೈತರ ನಾಯಕರಿಗೆ ತಿಳಿದಿಲ್ಲ. ಎರಡು ವರ್ಷ ಕಾಯ್ದೆ ಮುಂದೂಡುವ ವಿಚಾರವಾಗಿ ಪ್ರಧಾನಿ ನಿರ್ಧಾರ ಕೈಗೊಂಡಿದ್ದಾರೆ" ಎಂದರು.
"ಯಾವ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಮಾಡಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎನ್ನುವ ನಿಟ್ಟಿನಲ್ಲಿ ಟ್ಯ್ರಾಕ್ಟರ್ಗಳನ್ನು ತಡೆದಿದ್ದೇವೆ. ರೈತರ ಪ್ರತಿಭಟನೆ ಹತ್ತಿಕ್ಕಿಲ್ಲ. ಈ ರೀತಿಯಾದ ಹೋರಾಟ ಮಾಡಿ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ" ಎಂದು ಹೇಳಿದರು.
"ರೈತರ ಹೋರಾಟವು ಶಾಂತಿಯುತವಾಗಿ ನಡೆದಲ್ಲಿ ನಮ್ಮದು ಯಾವುದೇ ಆಕ್ಷೇಪವಿಲ್ಲ. ರೈತರ ಬೇಡಿಕೆಗಳಿಗೆ ಈಗಾಗಲೇ ಪ್ರಧಾನಿ ಮೋದಿ ಅವರು ಪರಿಹಾರ ಕಂಡುಕೊಂಡಿದ್ದಾರೆ. ಸತ್ಯಾಂಶ ತಿಳಿಯದೇ ಹೋರಾಟ ಮಾಡುವುದು ಸೂಕ್ತವಲ್ಲ" ಎಂದು ತಿಳಿಸಿದರು.