ಚಿತ್ರದುರ್ಗ, ಜ.26 (DaijiworldNews/PY): "ರಾಮ ಮಂದಿರ ನಿರ್ಮಾಣದ ತಾಂತ್ರಿಕ ತಂಡದಲ್ಲಿ ಚಿತ್ರದುರ್ಗ ಜಿಲ್ಲೆ ಮೂಲದ ಗುಹಾವಟಿ ಐಐಟಿ ನಿರ್ದೇಶಕ ಪ್ರೊ.ಟಿ.ಜಿ.ಸೀತಾರಾಮ್ ಅವರಿಗೆ ಸ್ಥಾನ ಸಿಕ್ಕಿರುವುದು ಹೆಮ್ಮೆಯ ಸಂಗತಿ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಗಣರಾಜ್ಯೋತ್ಸವ ಅಂಗವಾಗಿ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ರಾಷ್ಟ್ರ ಧ್ವಜಾರೋಣ ನೆರವೇರಿಸಿ ಮಾತನಾಡಿದ ಅವರು, "ಗಣರಾಜ್ಯೋತ್ಸವ ಎಂದರೆ ಜನರ ಉತ್ಸವ. ಪ್ರಜಾಪ್ರಭುತ್ವ, ಸಂವಿಧಾನದ ಶಕ್ತಿ ಎನ್ನುವಂತೆ ಪತ್ರಿಕೆ ಹಂಚುವ ಬಾಲಕ ರಾಷ್ಟ್ರಪತಿ ಆಗುತ್ತಾರೆ. ತರಕಾರಿ ಮಾರುವ ವ್ಯಕ್ತಿಯ ಮಗಳು ಐಎಎಸ್ ಅಧಿಕಾರಿಯೂ ಆಗುತ್ತಾರೆ. ನಮ್ಮಂಥ ಸಾಮಾನ್ಯ ಮಂದಿ ಮಂತ್ರಿಯಾಗಿದ್ದೇವೆ. ಇವೆಲ್ಲದಕ್ಕೂ ಸಂವಿಧಾನ ನೀಡಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಕಾರಣೀಕರ್ತರು" ಎಂದರು.
"ಪ್ರಧಾನಿ ನರೇಂದ್ರ ಮೋದಿ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನವನ್ನು ಪರಾಕ್ರಮ ದಿನವನ್ನಾಗಿ ಘೋಷಣೆ ಮಾಡಿರುವ ವಿಚಾರ ನಮ್ಮ ಸೈನಿಕರಿಗೆ ನೀಡಿದ ಅತ್ಯುತ್ತಮವಾದ ಗೌರವವಾಗಿದೆ" ಎಂದು ಹೇಳಿದರು.