ನವದಹಲಿ, ಜ.26 (DaijiworldNews/MB) : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಆಗ್ರಹಿಸಿ ಕಳೆದ ಒಂದೂವರೆ ತಿಂಗಳಿಗೂ ಅಧಿಕ ಕಾಲದಿಂದ ದೆಹಲಿಯ ಹಲವು ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಲಿರುವ ರೈತರು ಗಣರಾಜ್ಯೋತ್ಸವವಾದ ಈ ದಿನದಂದು ಟ್ರ್ಯಾಕ್ಟರ್ ರ್ಯಾಲಿ ಮೂಲಕ ಪ್ರತಿಭಟನೆಗೆ ಮುಂದಾಗಿದ್ದಾರೆ. ರೈತರು ಮಂಗಳವಾರ ಬೆಳಿಗ್ಗೆ ದೆಹಲಿ-ಹರಿಯಾಣ ಟಿಕ್ರಿ ಗಡಿ, ಸಿಂಘು ಗಡಿಯಲ್ಲಿ ಪೊಲೀಸ್ ಬ್ಯಾರಿಕೇಡ್ ಮುರಿದು ಮುನ್ನುಗ್ಗಿದ್ದಾರೆ. ದೆಹಲಿಗೆ ಈ ಎರಡು ಗಡಿಗಳ ಮೂಲಕ ಪ್ರವೇಶಿಸಿದ್ದಾರೆ.
ಸೋಮವಾರ, ದೆಹಲಿ ಪೊಲೀಸರು ರೈತರ ಮೆರವಣಿಗೆಗೆ 37 ಷರತ್ತುಗಳನ್ನು ನೀಡಿದ್ದರು. ಸಿಂಘು, ಟಿಕ್ರಿ, ಗಾಜಿಪುರ ಮತ್ತು ಚಿಲ್ಲಾ ನಾಲ್ಕು ಗಡಿಗಳಿಂದ ನಗರ ಪ್ರದೇಶಕ್ಕೆ ನಿಯಮಾವಳಿ ರೂಪಿಸಿದ್ದರು. ಬೆಳಿಗ್ಗೆ 10 ಗಂಟೆಗೆ ರೈತರ ಟ್ರಾಕ್ಟರ್ ರ್ಯಾಲಿ ದೆಹಲಿ ಪ್ರವೇಶಿಸಲು ಸಮಯ ನಿಗದಿಯಾಗಿತ್ತು. ಆದರೆ ಈ ಒಪ್ಪಂದ ಮುರಿದಿರುವ ರೈತರು ಬೆಳಗ್ಗೆ 8 ಗಂಟೆ ಸುಮಾರಿಗೆ ದೆಹಲಿ ಪ್ರವೇಶಿಸಿದ್ದಾರೆ.
ರೈತರಿಗೆ ಗಣರಾಜ್ಯೋತ್ಸವದ ಪರೇಡ್ ಬಳಿಕ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ಏತನ್ಮಧ್ಯೆ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ. ದೆಹಲಿ ಗಡಿ ಭಾಗದಲ್ಲಿ ಗೊಂದಲಕಾರಿ ವಾತಾವರಣ ನಿರ್ಮಾಣವಾಗಿದೆ.
ಪಂಜಾಬ್ ಹರಿಯಾಣ ಸೇರಿದಂತೆ ಹಲವು ರಾಜ್ಯದಿಂದ ಲಕ್ಷಾಂತರ ರೈತರು ಟ್ರ್ಯಾಕ್ಟರ್ ಮೂಲಕ ದೆಹಲಿಗೆ ತೆರಳಿದ್ದಾರೆ. ಪಂಜಾಬ್ನ ಪ್ರತಿ ಹಳ್ಳಿಯಿಂದಲೂ ಒಂದು ಟ್ರಾಕ್ಟರ್ ದೆಹಲಿಗೆ ಆಗಮಿಸಲಿದೆ.