ಬೆಂಗಳೂರು, ಜ.26 (DaijiworldNews/PY): "ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಸಂಪುಟ ಸಚಿವರಿಗೆ, ನಟ-ನಟಿಯರಿಗೆ ಹಾಗೂ ಧಾರ್ಮಿಕ ನಾಯಕರಿಗೆ ಎರಡನೇ ಹಂತದಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತದೆ" ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
"ಸುಮಾರು 500 ಜನಪ್ರಿಯ ವ್ಯಕ್ತಿಗಳಿಗೆ ಕೊರೊನಾ ಲಸಿಕೆ ಹಾಕಲು ಅನುಮತಿ ಕಲ್ಪಿಸುವಂತೆ ಈಗಾಗಲೇ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಲಾಗಿದೆ. ಇದು ಲಸಿಕೆಯ ಸುರಕ್ಷತೆಯ ವಿಚಾರದ ಬಗ್ಗೆ ಮಾಹಿತಿ ನೀಡಲು ನೆರವಾಗಲಿದೆ. ಜನರು ಪ್ರಭಾವಿ ವ್ಯಕ್ತಿಗಳ ಮುಖೇನ ಲಸಿಕೆ ಪಡೆದುಕೊಳ್ಳಲು ಪ್ರೇರೇಪಿತರಾಗಲಿದ್ದಾರೆ" ಎಂದು ಹೇಳಿದ್ದಾರೆ.
"ಎರಡು ಕೊರೊನಾ ಲಸಿಕೆಗಳು ಕೂಡಾ ಸುರಕ್ಷಿತವಾಗಿವೆ. ಎರಡು ಲಸಿಕೆಗಳಿಗೆ ಸಾಕಷ್ಟು ಪರೀಕ್ಷೆಗಳ ನಂತರವೇ ಅನುಮತಿ ನೀಡಲಾಗಿದೆ. ಲಸಿಕೆ ಪಡೆದುಕೊಂಡವರ ಪೈಕಿ ದೊಡ್ಡ ರೀತಿಯಾದ ಅಡ್ಡಪರಿಣಾಮಗಳ ಕಾಣಿಸಿಲ್ಲ. ಆದರೆ, ಸಣ್ಣ-ಪುಟ್ಟ ಅಡ್ಡ ಪರಿಣಾಮಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಕೊರೊನಾ ಲಸಿಕೆಯ ಬಗ್ಗೆ ಸುಳ್ಳು ವದಂತಿಗಳನ್ನು ಹರಡಬಾರದು. ಅಗತ್ಯವಿದ್ದಲ್ಲಿ ಇನ್ನಷ್ಟು ಲಸಿಕೆಗಳು ರಾಜ್ಯಕ್ಕೆ ಬರಲಿವೆ" ಎಂದಿದ್ದಾರೆ.