ನವದೆಹಲಿ, ಜ.26 (DaijiworldNews/MB) : ದೇಶದಾದ್ಯಂತ ಇಂದು ಗಣರಾಜ್ಯೋತ್ಸವ ಆಚರಣೆಯ ಸಂಭ್ರಮವಾಗಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ದೇಶದ ಜನತೆಗೆ ಶುಭಾಶಯ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ''ದೇಶವಾಸಿಗಳಿಗೆ ಗಣರಾಜ್ಯೋತ್ಸವದ ಶುಭಾಶಯಗಳು, ಜೈ ಹಿಂದ್'' ಎಂದು ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡಾ ದೇಶದ ಜನರಿಗೆ ಶುಭಾಶಯ ತಿಳಿಸಿದ್ದಾರೆ. ''ಸತ್ಯಾಗ್ರಹಿ ರೈತ-ಕಾರ್ಮಿಕರಾಗಲಿ, ಸಣ್ಣ-ಮಧ್ಯಮ ಉದ್ಯಮಿಗಳಾಗಲಿ, ಉದ್ಯೋಗವನ್ನು ಬಯಸುವ ಯುವಜನರಾಗಲಿ, ಹಣದುಬ್ಬರದಿಂದ ತೊಂದರೆಗೀಡಾದ ಗೃಹಿಣಿಯಾಗಲಿ ಭಾರತದ ಪ್ರತಿಯೊಬ್ಬ ನಾಗರಿಕನು ದೇಶದ ಭವಿಷ್ಯವನ್ನು ನಿರ್ಧರಿಸುತ್ತಾರೆ. ಗಣರಾಜ್ಯವು ನಿಮ್ಮಿಂದ, ಗಣರಾಜ್ಯ ನಿಮ್ಮದು'' ಎಂದು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ, ''ಗಣರಾಜ್ಯೋತ್ಸವ ಭಾರತದ ಬಹುವರ್ಣ ವೈವಿಧ್ಯತೆ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ. 1950 ರಲ್ಲಿ ನಮ್ಮ ಸಂವಿಧಾನವನ್ನು ಜಾರಿಗೆ ತಂದ ಎಲ್ಲ ಮಹಾನ್ ವ್ಯಕ್ತಿತ್ವಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ. ಭಾರತೀಯ ಗಣರಾಜ್ಯವನ್ನು ತಮ್ಮ ಶೌರ್ಯದಿಂದ ರಕ್ಷಿಸಿದ ಎಲ್ಲ ಧೈರ್ಯಶಾಲಿ ಪುರುಷರಿಗೆ ನಮಸ್ಕರಿಸುತ್ತೇನೆ'' ಎಂದಿದ್ದಾರೆ.
ಇನ್ನು ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಾಡಿನ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ. ''ನಾಡಿನ ಸಮಸ್ತ ಜನತೆಗೆ 72ನೇ ಗಣರಾಜ್ಯೋತ್ಸವ ದಿನದ ಹಾರ್ದಿಕ ಶುಭಾಶಯಗಳು. ನಮ್ಮ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಮ್ಮ ಶ್ರೇಷ್ಠ ಸಂವಿಧಾನವೇ ಆಧಾರ. ಸಂವಿಧಾನದ ಸದಾಶಯಗಳನ್ನು ಪಾಲಿಸುವ ಜೊತೆಗೆ ಭಾರತದ ಏಕತೆ, ವೈವಿಧ್ಯತೆ, ಅನನ್ಯತೆಗಳನ್ನು ಎತ್ತಿಹಿಡಿಯೋಣ'' ಎಂದು ಟ್ವೀಟಿಸಿದ್ದಾರೆ.