ಉಡುಪಿ, ಜ 24(DaijiworldNews/SM): ರಾಜ್ಯದಲ್ಲಿ ಇನ್ನು ಕನಸಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಕನಸಿನ ಮಾತಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆಯನ್ನೂ ಕೂಡ ಎದುರಿಸಲು ಸಾಧ್ಯವಾಗಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದೇ ಒಂದು ಕ್ಷೇತ್ರವನ್ನು ಮಾತ್ರ ಕಾಂಗ್ರೆಸ್ ಗೆದ್ದುಕೊಂಡಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿಯೇ ಗೆಲುವು ದಾಖಲಿಸಲಿದ್ದು, ಇದ್ದ ಒಂದು ಕ್ಷೇತ್ರವನ್ನು ಕೂಡ ಕಾಂಗ್ರೆಸ್ ಕಳೆದುಕೊಳ್ಳಲಿದೆ ಎಂದು ಸಚಿವ ಆರ್. ಅಶೋಕ್ ಅವರು ಭವಿಷ್ಯ ನುಡಿದಿದ್ದಾರೆ.
ಇನ್ನು ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಡಿಕೆ ಶಿವಕುಮಾರ್ ಇನ್ನೂ ಕೂಡ ಹಳೆ ಮೈತ್ರಿಯ ಗುಂಗಿನಲ್ಲಿದ್ದಾರೆ. ಕುಮಾರಸ್ವಾಮಿಗೆ ಬೆನ್ನಿಗೆ ಚೂರಿ ಹಾಕಿದ ಅನುಭವ ಇನ್ನೂ ಹಾಗೆ ಇದೆ. ಕಾಂಗ್ರೆಸ್ಸಿನಿಂದ ಬೇಸತ್ತವರು ನಮ್ಮ ಜೊತೆ ಬಂದಿದ್ದಾರೆ. ನಮ್ಮ ಜೊತೆ ಬಂದವರಿಗೆ ಕಾಂಗ್ರೆಸ್ಸಿನಲ್ಲಿ ಯಾವುದೇ ಪದವಿಗಳು ಇರಲಿಲ್ಲ. ಆ ಸರಕಾರದಲ್ಲಿ ಅವರಿಗೆ ಸಿಕ್ಕಿದ ಖಾತೆಗಳ ಬಗ್ಗೆ ತೃಪ್ತಿ ಇರಲಿಲ್ಲ. ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದ ಎಲ್ಲರಿಗೂ ಉತ್ತಮ ಖಾತೆಗಳನ್ನೇ ನೀಡಿದ್ದೇವೆ ಎಂದರು.