ನವದೆಹಲಿ, ಜ.25 (DaijiworldNews/MB) : ''ಮತದಾನ ಹಕ್ಕು ಪಡೆಯಲು ವಿಶ್ವದಾದ್ಯಂತ ಹಲವು ಮಂದಿ ಹೋರಾಟ ನಡೆಸಿದ್ದು ಜನರು ಮತದಾನದ ಹಕ್ಕಿಗೆ ಗೌರವ ನೀಡಬೇಕು'' ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ತಿಳಿಸಿದರು.
ಸೋಮವಾರ 11ನೇ ರಾಷ್ಟ್ರೀಯ ಮತದಾರರ ದಿನಾಚರಣೆಯ ಸಂದರ್ಭ ಮಾತನಾಡಿದ ಅವರು, ''ಅಮೇರಿಕಾದಲ್ಲಿ ಮತದಾನದ ಹಕ್ಕಿಗಾಗಿ ದಶಕಗಳ ಹೋರಾಟ ನಡೆದಿದೆ. ಬ್ರಿಟನ್ನಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಪಡೆಯಲು ದೀರ್ಘ ಹೋರಾಟ ನಡೆದಿದೆ'' ಎಂದು ಹೇಳಿದರು.
ಹಾಗೆಯೇ, ''ಸ್ವಾತಂತ್ರ್ಯ ಪೂರ್ವ ಭಾರತದಲ್ಲೂ ಇದೇ ಪರಿಸ್ಥಿತಿ ಇದ್ದು, ಸ್ವಾತಂತ್ರ್ಯದ ಬಳಿಕ 21 ವರ್ಷದ ಎಲ್ಲಾ ವಯಸ್ಕರಿಗೂ ಮತದಾನ ಮಾಡುವ ಹಕ್ಕನ್ನು ನೀಡಲಾಗಿದೆ. ಬಳಿಕ ಅದನ್ನು 18 ಕ್ಕೆ ಇಳಿಸಲಾಗಿದೆ'' ಎಂದು ಹೇಳಿದರು.
''ಈ ಹಕ್ಕನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಪ್ರಮುಖ ಹಕ್ಕೆಂದು ಪರಿಗಣಿಸಿದ್ದರು. ಈ ನಿಟ್ಟಿನಲ್ಲಿ ಯುವ ಜನರು ಮತ ಚಲಾಯಿಸಿ, ಇತರರಿಗೂ ಮತ ಚಲಾಯಿಸಲು ಪ್ರೇರೆಪಣೆ ನೀಡಬೇಕು'' ಎಂದು ಮನವಿ ಮಾಡಿದರು.