ಹೊಸಪೇಟೆ, ಜ.25 (DaijiworldNews/HR): "ದೊಡ್ಡ ಖಾತೆ ಕೊಟ್ಟು ಬಳಿಕ ಸಣ್ಣ ಖಾತೆ ಕೊಟ್ಟರೆ ನನ್ನ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡುತ್ತದೆ, ಅದಕ್ಕೆ ನಾನು ಉತ್ತರಿಸುತ್ತ ಓಡಾಡಬೇಕಾಗುತ್ತದೆ" ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೊದಲಿನಿಂದಲೂ ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ, ಸದ್ಯ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿಯೇ ಇರಲಿದ್ದು, ಮುಖ್ಯಮಂತ್ರಿಗಳು ಕೈಗೊಂಡಿರುವ ನಿರ್ಧಾರ ಪಾಲಿಸುತ್ತೇನೆ" ಎಂದರು.
ಇನ್ನು "ಮುಖ್ಯಮಂತ್ರಿಯವರಿಗೆ ಕೆಲ ತಾಂತ್ರಿಕ ಒತ್ತಡಗಳಿರಬಹುದು, ಆದರೆ ನನ್ನ ಹಲವು ಬೇಡಿಕೆಗಳನ್ನು ಈಡೇರಿಸಿದ್ದಾರೆ. ವಿಜಯನಗರ ಜಿಲ್ಲೆ ಘೋಷಣೆಗೂ ಖಾತೆ ಬದಲಾವಣೆಗೂ ಯಾವುದೇ ಸಂಬಂಧವಿಲ್ಲ. ಆಕ್ಷೇಪಣೆ ಸ್ವೀಕರಿಸಲಾಗಿದೆ. ಎಲ್ಲ ಪ್ರಕ್ರಿಯೆ ಮುಗಿದ ನಂತರ ಅಂತಿಮ ಅಧಿಸೂಚನೆ ಹೊರಬೀಳಬಹುದು" ಎಂದು ಹೇಳಿದ್ದಾರೆ.