ಬೆಂಗಳೂರು, ಜ.25 (DaijiworldNews/MB) : ಎಫ್ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಯುವತಿ ಸೇರಿದಂತೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಇಬ್ಬರು ನೌಕರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೆಪಿಎಸ್ಸಿ ಎಸ್ಡಿಎ ರಮೇಶ್ ಹಾಗೂ ಬೆರಳಚ್ಚುಗಾರ್ತಿ ಸನಾ ಬೇಡಿ ಬಂಧಿತರು. ಎಫ್ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ಇವರು ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಸಿಬಿ ಜಂಟಿ ಕಮಿಷನರ್ ಸಂದೀಪ ಪಾಟೀಲ, ''ಪರೀಕ್ಷೆ ನಿಯಂತ್ರಕರ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸನಾ ಬೇಡಿ ಎಂಬಾಕೆಯೇ ಪ್ರಶ್ನೆಪತ್ರಿಕೆಯನ್ನು ರಮೇಶ್ಗೆ ನೀಡಿದ್ದು, ರಮೇಶ್ ವಾಣಿಜ್ಯ ತೆರಿಗೆ ಇಲಾಖೆಯ ಇನ್ಸ್ಪೆಕ್ಟರ್ ಚಂದ್ರು ಹಾಗೂ ಇತರರಿಗೆ ಮಾರಾಟ ಮಾಡಿದ್ದ. ಬಳಿಕ ಈ ಪ್ರಶ್ನೆ ಪತ್ರಿಕೆಯು ಪರಿಕ್ಷೆಯ ಅಭ್ಯರ್ಥಿಗಳಿಗೆ ದೊರೆತಿದೆ. ಪ್ರಸ್ತುತ ಆರೋಪಿಗಳನ್ನು ಬಂಧಿಸಲಾಗಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿ, ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು'' ಎಂದು ತಿಳಿಸಿದ್ದಾರೆ.