ಬೆಂಗಳೂರು, ಜ.25 (DaijiworldNews/HR): "ಕಾಂಗ್ರೆಸ್ ದ್ವಂದ್ವ ನೀತಿಯ ಮೂಲಕ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಇದೀಗ ಊಸರವಳ್ಳಿಯಂತೆ ನಾಟಕವಾಡುತ್ತಿದೆ" ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೃಷಿ ಕಾಯ್ದೆಯನ್ನು ರೈತರಿಗಾಗಿ ಅವರ ಆದಾಯ ಹೆಚ್ಚಿಸುವ ಸಲುವಾಗಿ ತರಲಾಗಿದೆ, ಜೊತೆಗೆ ಕಾಯ್ದೆಗಳು ರೈತರ ಪರವಾಗಿದ್ದು, ಇದರಲ್ಲಿ ಯಾವುದೇ ಸಂಶಯಬೇಡ. ಈ ಬಗ್ಗೆ ಮನವರಿಕೆಯೂ ಮಾಡಿಕೊಡಲಾಗಿದ್ದು, ರೈತರು ಸರ್ಕಾರದ ಜೊತೆ ಸಹಕರಿಸಿ ಟ್ರ್ಯಾಕ್ಟರ್ ರ್ಯಾಲಿ ಕೈಬಿಡಬೇಕು" ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು "ನಾವು ಎಪಿಎಂಸಿ ರದ್ದುಮಾಡುತ್ತಿಲ್ಲ, ಬದಲಾಗಿ ರೈತ ತನ್ನ ಬೆಳೆಯನ್ನು ಎಲ್ಲಿಬೇಕಾದರೂ ಮಾರಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಿದೆ. ಲಾಭನಷ್ಟಕ್ಕೆ ವ್ಯಾಪರಸ್ಥರು ಹೊಣೆಯಾಗುತ್ತಾರೆಯೇ ಹೊರತು ರೈತರಲ್ಲ. ರೈತ ತನ್ನ ಬೆಳೆಯನ್ನು ತನಗೆ ಇಚ್ಛಿಸಿದ ಬೆಲೆಯಲ್ಲಿ ಮುಕ್ತವಾಗಿ ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರವನ್ನು ಸರ್ಕಾರ ಕಲ್ಪಿಸಿಕೊಟ್ಟಿದೆ" ಎಂದು ಹೇಳಿದ್ದಾರೆ.