ಚೆನ್ನೈ, ಜ.25 (DaijiworldNews/MB) : ''ಕಳೆದ ಆರು ವರ್ಷಗಳಲ್ಲಿ ಪ್ರಧಾನಿ ಮೋದಿ ಭಾರತವನ್ನು ದುರ್ಬಲಗೊಳಿಸಿದ್ದಾರೆ. ರೈತರ ಮೇಲೆ ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿಯವರು, ದೇಶವನ್ನು ದುರ್ಬಲಗೊಳಿಸಿದ್ದಾರೆ'' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೂರಿದರು.
ತಮಿಳುನಾಡಿನ ಕರೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ''ಪ್ರಧಾನಿ ಮೋದಿ ನಮ್ಮ ರೈತರ ಮೇಲೆ ದಾಳಿ ನಡೆಸಿದ್ದಾರೆ. ಭಾರತದ ಕೃಷಿ ಕ್ಷೇತ್ರವನ್ನೇ ದೊಡ್ಡ ಕೈಗಾರಿಕೋದ್ಯಮಿಗಳಿಗೆ ನೀಡಲೆಂದು ಮೂರು ಹೊಸ ಕಾಯ್ದೆಗಳನ್ನು ಮೋದಿ ತಂದಿದ್ದಾರೆ. ಈ ಕಾಯ್ದೆಯ ಪ್ರಕಾರ ರೈತರು ನ್ಯಾಯಾಲಯಕ್ಕೆ ಹೋಗಲು ಆಗದು'' ಎಂದು ಹೇಳಿದರು.
''ನಮ್ಮ ಆರ್ಥಿಕತೆಯನ್ನೇ ಕೇಂದ್ರ ಸರ್ಕಾರ ನಾಶ ಮಾಡಿದೆ. ಆದರೆ ನಾವು ಭಾರತದ ಅಡಿಪಾಯ ನಾಶವಾಗಲು ಬಿಡೆವು'' ಎಂದು ಹರಿಹಾಯ್ದರು.
''ಪ್ರಸ್ತುತ ಯುವಕರಿಗೆ ಕೆಲಸವಿಲ್ಲ. ಇದು ನಮ್ಮ ಯುವಕರ ತಪ್ಪಲ್ಲ. ಪ್ರಧಾನಿ ಮೋದಿ ಕೈಗೊಂಡ ತಪ್ಪು ನಿರ್ಧಾರಗಳ ಫಲವಾಗಿ ನಮ್ಮ ಯುವಕರಿಗಿಂದು ಈ ಸಮಸ್ಯೆ ಎದುರಾಗಿದೆ'' ಎಂದು ಆರೋಪಿಸಿದರು.
ಇದೇ ವೇಳೆ, ''ದೇಶದಾದ್ಯಂತ ಬಿಜೆಪಿ-ಆರ್ಎಸ್ಎಸ್ ಸಿದ್ಧಾಂತ ದ್ವೇಷ ಹರಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ'' ಎಂದು ಕೂಡಾ ಹೇಳಿದರು.